
ನವದೆಹಲಿ: ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಘರ್ಷ ಪೀಡಿತ ಪಶ್ಚಿಮ ಏಷ್ಯಾ ಪ್ರದೇಶವನ್ನು ಶ್ಲಾಘಿಸಿದರು. ಇದು ಸದನದಲ್ಲಿ ಕೆಲಕಾಲ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.
ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಐದನೇ ಅವಧಿಗೆ ಆಯ್ಕೆಯಾಗಿರುವ ಓವೈಸಿ ಅವರು ಇಂದು ನೂತನ ಸಂಸದರಾಗಿ ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನದ ನಂತರ, ಅವರು ಜೈ ಭೀಮ್, ಜೈ ತೆಲಂಗಾಣ, 'ಜೈ ಪ್ಯಾಲೆಸ್ತೀನ್' ಹಾಗೂ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರು.
ಓವೈಸಿ ಅವರು ಪ್ರಸ್ತುತ ಸಂಘರ್ಷ ಎದುರಿಸುತ್ತಿರುವ ಪ್ಯಾಲೆಸ್ತೀನ್ ಅನ್ನು ಶ್ಲಾಘಿಸಿದ್ದಕ್ಕೆ ಕೆಲ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಮಾಣ ವಚನ ಮುಗಿದ ಬಳಿಕ ಕೋಲಾಹಲಕ್ಕೆ ಕಾರಣವಾಯಿತು.
ಈ ವೇಳೆ ಸ್ಪೀಕರ್ ಕುರ್ಚಿಯಲ್ಲಿದ್ದ ರಾಧಾ ಮೋಹನ್ ಸಿಂಗ್ ಅವರು, ಪ್ರಮಾಣ ವಚನದ ಹೊರತಾಗಿ ಇತರೆ ಯಾವುದೇ ವಿಷಯ ಖಡತದಲ್ಲಿ ದಾಖಲೆಯಾಗುವುದಿಲ್ಲ ಎಂದು ಸದಸ್ಯರಿಗೆ ಭರವಸೆ ನೀಡಿದರು.
ಆದರೂ ಕೆಲ ನಿಮಿಷಗಳ ಕಾಲ ಗೊಂದಲ ಮುಂದುವರಿದಿತ್ತು. ನಂತರ ಪ್ರಮಾಣ ವಚನ ಸ್ವೀಕಾರ ಆರಂಭವಾಯಿತು.
Advertisement