
ರಾಂಚಿ: ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಶುಕ್ರವಾರ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ರಾಂಚಿಯ ಬಿರ್ಸಾ ಮುಂಡಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಸೋರೆನ್ ಜೈಲಿನಿಂದ ಹೊರಬರುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಜೆಎಂಎಂ ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿದರು ಮತ್ತು ಅವರ ಪರವಾಗಿ ಘೋಷಣೆಗಳನ್ನು ಕೂಗಿದರು.
ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್, ಜೆಎಂಎಂ ಶಾಸಕರು, ನ್ಯಾಯಾಂಗ ಮತ್ತು ತಮಗೆ ಬೆಂಬಲ ನೀಡಿದ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
"ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಹೇಮನ್ ಸೊರೆನ್ ಅವರನ್ನು ಇಂದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಸೋರೆನ್ ಜನರತ್ತ ಕೈಬೀಸುತ್ತ ತಮ್ಮ ತಂದೆ ಮತ್ತು ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರಿಂದ ಆಶೀರ್ವಾದ ಪಡೆದರು.
ಹೈಕೋರ್ಟ್ ನ್ಯಾಯಮೂರ್ತಿ ರೊಂಗೋನ್ ಮುಖೋಪಾಧ್ಯಾಯ ಅವರ ಏಕ ಸದಸ್ಯ ಪೀಠ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿಗೆ ಜಾಮೀನು ಮಂಜೂರು ಮಾಡಿದೆ.
"ಜಾರ್ಖಂಡ್ ಮಾಜಿ ಸಿಎಂ, ಇಬ್ಬರ ಶ್ಯೂರಿಟಿಯೊಂದಿಗೆ 50,000 ರೂ.ಗಳ ಜಾಮೀನು ಬಾಂಡ್ ಅನ್ನು ಒದಗಿಸಿದ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶಿಸಲಾಗಿದೆ" ಎಂದು ನ್ಯಾಯಮೂರ್ತಿ ಮುಖೋಪಾಧ್ಯಾಯ ಅವರು ಆದೇಶದಲ್ಲಿ ತಿಳಿಸಿದ್ದಾರೆ.
Advertisement