
ರಾಂಚಿ: ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನಿರ್ಮಾಣ ಹಂತದ ಸೇತುವೆಗಳ ಕುಸಿತ ಪ್ರಕರಣಗಳು ಮುಂದುವರೆದಿದೆ. ಬಿಹಾರದಲ್ಲಿ ಇತ್ತೀಚಿಗೆ ನಾಲ್ಕು ನಿರ್ಮಾಣ ಹಂತದ ಸೇತುವೆ ಕುಸಿತ ಪ್ರಕರಣ ವರದಿಯಾಗಿತ್ತು. ಇದೀಗ ಜಾರ್ಖಂಡ್ ನ ಗಿರಿದಿಹ್ ನಲ್ಲಿ ನಿರ್ಮಾಣ ಹಂತದ ಸೇತುವೆಯೊಂದು ಕುಸಿದಿದೆ.
ಗಿರಿದಿಹ್ ಜಿಲ್ಲೆಯಲ್ಲಿ ಭಾರೀ ಮಳೆಗೆ ಅರ್ಗಾ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದೆ. ಆದರೆ, ಯಾವುದೇ ಪ್ರಾಣ ಹಾನಿ, ಗಾಯ ಕುರಿತು ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ 235 ಕಿಮೀ ದೂರದಲ್ಲಿರುವ ದಿಯೋರಿ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ.
ಡುಮೃತೋಲಾ ಮತ್ತು ಕರಿಪಾಹ್ರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಫತೇಪುರ್-ಭೆಲ್ವಾಗತಿ ರಸ್ತೆಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದ್ದು, ಭಾರಿ ಮಳೆಗೆ ಸೇತುವೆಯ ಫಿಲ್ಲರ್ ಕುಸಿದಿದ್ದು, ಮರು ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಗಿರಿದಿಹ್ ಕಾರ್ಯಪಾಲಕ ಅಭಿಯಂತರ ವಿನಯ್ ಕುಮಾರ್ ತಿಳಿಸಿದ್ದಾರೆ.
ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದು, ಜಾರ್ಖಂಡ್‌ನ ಗಿರಿದಿಹ್ ಮತ್ತು ಬಿಹಾರದ ಜಮುಯಿ ಜಿಲ್ಲೆಯ ದೂರದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಿದೆ ಎಂದು ಮೂಲಗಳು ತಿಳಿಸಿವೆ.
Advertisement