ಪಶ್ಚಿಮ ಬಂಗಾಳದ ಎಲ್ಲ 42 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬೇಕು: ಪ್ರಧಾನಿ ಮೋದಿ
ಕೃಷ್ಣಾನಗರ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು ಎಂದು ರಾಜ್ಯ ಭಾರತೀಯ ಜನತಾ ಪಕ್ಷಕ್ಕೆ ಶನಿವಾರ ಟಾರ್ಗೆಟ್ ನೀಡಿದ್ದಾರೆ.
ಇಂದು ನಾಡಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ 15 ಸಾವಿರ ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಟಿಎಂಸಿ ಎಂದರೆ 'ತು, ಮೈನ್ ಔರ್ ಭ್ರಷ್ಟಾಚಾರ' ಎಂದು ಆರೋಪಿಸಿದರು.
ಕೃಷ್ಣಾನಗರದ ಬಿಜೋಯ್ ಸಂಕಲ್ಪ ಸಭಾದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಅವರು, "ಇಷ್ಟು ಸಂಖ್ಯೆಯಲ್ಲಿ ಇಲ್ಲಿ ನೆರೆದಿರುವ ನಿಮ್ಮೆಲ್ಲರನ್ನು ನೋಡಿದಾಗ 'ಎನ್‌ಡಿಎ ಸರ್ಕಾರ, 400 ಪಾರ್' ಎಂದು ಹೇಳುವ ವಿಶ್ವಾಸ ಮೂಡುತ್ತಿದೆ.
"ಟಿಎಂಸಿ ದೌರ್ಜನ್ಯ, ಕುಟುಂಬ ರಾಜಕೀಯ ಮತ್ತು ದ್ರೋಹಕ್ಕೆ ಸಮಾನಾರ್ಥಕವಾಗಿದೆ. ಪಶ್ಚಿಮ ಬಂಗಾಳದ ಜನ ರಾಜ್ಯ ಸರ್ಕಾರದ ಕಾರ್ಯವೈಖರಿಯಿಂದ ನಿರಾಶೆಗೊಂಡಿದ್ದಾರೆ" ಎಂದು ಮೋದಿ ಹೇಳಿದರು.
ಸಂದೇಶ್‌ಖಾಲಿಯಲ್ಲಿ ಟಿಎಂಸಿ ನಾಯಕರ ವಿರುದ್ಧ ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದನ್ನು ಉಲ್ಲೇಖಿಸಿದ ಮೋದಿ, ರಾಜ್ಯ ಸರ್ಕಾರ ಆ ಪ್ರದೇಶದ 'ಸಂಕಷ್ಟದಲ್ಲಿರುವ ತಾಯಂದಿರು ಮತ್ತು ಸಹೋದರಿಯರನ್ನು' ಬೆಂಬಲಿಸುವ ಬದಲು ಆರೋಪಿಗಳ ಪರ ನಿಂತಿದೆ ಎಂದು ಟೀಕಿಸಿದರು.
ಪುರುಲಿಯಾ ಜಿಲ್ಲೆಯಲ್ಲಿರುವ ದಾಮೋದರ್ ವ್ಯಾಲಿ ಕಾರ್ಪೊರೇಷನ್‌ನ ರಘುನಾಥಪುರ ಥರ್ಮಲ್ ಪವರ್ ಸ್ಟೇಷನ್ IIನೇ ಹಂತಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದರು.
650 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಮೆಜಿಯಾ ಥರ್ಮಲ್ ಪವರ್ ಸ್ಟೇಷನ್‌ನಲ್ಲಿ ಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ (ಎಫ್‌ಜಿಡಿ) ವ್ಯವಸ್ಥೆಯನ್ನು ಉದ್ಘಾಟಿಸಿದರು.
ಇದೇ ವೇಳೆ 940 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಾಲ್ಕು ರೈಲು ಯೋಜನೆಗಳನ್ನು ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ