ನಾವು ಸಾವಿನ ದವಡೆಯಲ್ಲಿದ್ದೇವೆ: ರಷ್ಯಾ ಸೇನೆಗೆ ತಳ್ಳಲ್ಪಟ್ಟ ಭಾರತೀಯರ ಆಕ್ರಂದನ; ಕೇಂದ್ರದ ನೆರವಿಗೆ ಮನವಿ

ಪಂಜಾಬ್, ಹರ್ಯಾಣ ಮೂಲದ ಹಲವು ಭಾರತೀಯರು ರಷ್ಯಾ-ಯುಕ್ರೇನ್ ಸಂಗ್ರಾಮದಲ್ಲಿ ಸಿಲುಕಿದ್ದು, ಹಲವು ಭಾರತೀಯರು ಅವರಿಗೆ ಅರಿವಿಲ್ಲದಂತೆ ರಷ್ಯಾ ಸೇನೆಗೆ ತಳ್ಳಲ್ಪಟ್ಟಿದ್ದಾರೆ.
ರಷ್ಯಾದಲ್ಲಿ ಸಿಲುಕಿರುವ ಭಾರತೀಯ ಯುವಕರು
ರಷ್ಯಾದಲ್ಲಿ ಸಿಲುಕಿರುವ ಭಾರತೀಯ ಯುವಕರುTNIE
Updated on

ಮಾಸ್ಕೋ: ಪಂಜಾಬ್, ಹರ್ಯಾಣ ಮೂಲದ ಹಲವು ಭಾರತೀಯರು ರಷ್ಯಾ-ಯುಕ್ರೇನ್ ಸಂಗ್ರಾಮದಲ್ಲಿ ಸಿಲುಕಿದ್ದು, ಹಲವು ಭಾರತೀಯರು ಅವರಿಗೆ ಅರಿವಿಲ್ಲದಂತೆ ರಷ್ಯಾ ಸೇನೆಗೆ ತಳ್ಳಲ್ಪಟ್ಟಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಭಾರತೀಯರು ಈಗ ಸುರಕ್ಷಿತವಾಗಿ ಭಾರತಕ್ಕೆ ಮರಳಲು ವಿದೇಶಾಂಗ ಇಲಾಖೆ ನೆರವು ಕೋರಿದ್ದಾರೆ.

ಗಗನ್ ದೀಪ್ ಸಿಂಗ್ (24) ಲವ್ ಪ್ರೀತ್ ಸಿಂಗ್ (24) ನರೈನ್ ಸಿಂಗ್ (22) ಗುರ್ಪ್ರೀತ್ ಸಿಂಗ್ (21) ಗುರ್ ಪ್ರೀತ್ ಸಿಂಗ್ (23) ಹರ್ಷ್ ಕುಮಾರ್ (20) ಹಾಗೂ ಅಭಿಷೇಕ್ ಕುಮಾರ್ (21) ರಷ್ಯಾದಲ್ಲಿ ಸಿಲುಕಿರುವ ಭಾರತೀಯರಾಗಿದ್ದಾರೆ. ಈ ಪೈಕಿ 5 ಮಂದಿ ಪಂಜಾಬ್ ನ ಮೂಲದವರಾಗಿದ್ದರೆ, ಇಬ್ಬರು ಹರ್ಯಾಣ ಮೂಲದವರಾಗಿದ್ದಾರೆ ಎಂದು ಹಿಂದೂ ಪತ್ರಿಕೆ ವರದಿ ಮಾಡಿದೆ.

ಈ ಮಧ್ಯೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಭಾರತೀಯರಿಗೆ ರಷ್ಯಾ ಯೋಧರ ಉಡುಗೆ ತೊಡಿಸಲಾಗಿರುವುದು ಕಂಡುಬಂದಿದ್ದು, ತಮ್ಮ ಇಚ್ಛೆಗೆ ವಿರುದ್ಧವಾಗಿ ತಮ್ಮನ್ನು ಯುದ್ಧದಲ್ಲಿ ರಷ್ಯಾ ಪರ ಹೋರಾಡುವಂತೆ ಒತ್ತಾಯಿಸಲಾಗುತ್ತಿದೆ, ಇಲ್ಲಿಂದ ತಮ್ಮನ್ನು ಶೀಘ್ರವೇ ಹೊರತರಬೇಕೆಂದು ಭಾರತ ಸರ್ಕಾರಕ್ಕೆ ಯುವಕರು ಮನವಿ ಮಾಡಿದ್ದಾರೆ. ವೀಡಿಯೋದಲ್ಲಿ, ಅವರಲ್ಲಿ 6 ಮಂದಿಯನ್ನು ಮೂಲೆಯಲ್ಲಿ ಕೂಡಿಹಾಕಿರುವುದು ಕಂಡುಬಂದಿದ್ದು, ಹರಿಯಾಣದ ಕರ್ನಾಲ್‌ನ 19 ವರ್ಷದ ಹರ್ಷ್ ತಮ್ಮ ದುಸ್ಥಿತಿಯನ್ನು ವಿವರಿಸಿದ್ದಾರೆ.

ರಷ್ಯಾದಲ್ಲಿ ಸಿಲುಕಿರುವ ಭಾರತೀಯ ಯುವಕರು
ರಷ್ಯಾ-ಉಕ್ರೇನ್ ಯುದ್ಧದಲ್ಲಿ 2ನೇ ಭಾರತೀಯ ಸಾವು, ವಂಚನೆಗೊಳಗಾಗಿ 'Wagner Army' ಸೇರಿದ್ದ ತೆಲಂಗಾಣ ಯುವಕ!

ಹರ್ಷ್ ಕುಟುಂಬ ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿ NDTV ಪ್ರಕಟಿಸಿರುವ ವರದಿಯ ಪ್ರಕಾರ, ತಮ್ಮ ಮಗ ವಿದೇಶದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದ. ಆತನಿಗೆ "ರಷ್ಯಾ ಮೂಲಕ ಹೋದರೆ ಆಯ್ಕೆಯ ದೇಶಕ್ಕೆ ವಲಸೆ ಹೋಗುವುದು ಸುಲಭ" ಎಂಬ ನೆಪದಲ್ಲಿ ರಷ್ಯಾಕ್ಕೆ ಕರೆದೊಯ್ಯಲಾಗಿದೆ. ರಷ್ಯಾಗೆ ತೆರಳುತ್ತಿದ್ದಂತೆಯೇ ಆತನ ಪಾಸ್ ಪೋರ್ಟ್ ನ್ನು ಕಿತ್ತುಕೊಳ್ಳಲಾಯಿತು. ತಾನು ರಷ್ಯಾದ ಸೈನಿಕರಿಂದ ಸಿಕ್ಕಿಬಿದ್ದಿದ್ದೇನೆ ಎಂದು ನಮಗೆ ಹೇಳಿದ್ದ, ರಷ್ಯಾ ಸೈನಿಕರು 10 ವರ್ಷಗಳ ಕಾಲ ಜೈಲಿನಲ್ಲಿ ಇರಿಸುವುದಾಗಿ ಬೆದರಿಕೆ ಹಾಕಿ ಆತನನ್ನು ಯುದ್ಧದಲ್ಲಿ ತೊಡಗುವಂತೆ ಒತ್ತಾಯಿಸಿದ್ದರು ಎಂದು ಹರ್ಷ್ ಎಂಬಾತನ ಪೋಷಕರು ನಡೆದ ವೃತ್ತಾಂತ ಹೇಳಿದ್ದಾರೆ.

ಈ ಪೈಕಿ ಓರ್ವ ಯುವಕ ಹೊಸ ವರ್ಷವನ್ನು ಆಚರಿಸಲು ತಾನು ರಷ್ಯಾಕ್ಕೆ ಭೇಟಿ ನೀಡಿದ್ದ. ಆತನನ್ನು ಬಲವಂತವಾಗಿ ಯುಕ್ರೇನ್‌ನೊಂದಿಗೆ ನಡೆಯುತ್ತಿದ್ದ ಯುದ್ಧದಲ್ಲಿ ರಷ್ಯಾ ಪರ ಹೋರಾಡಲು ಕಳುಹಿಸಲಾಗಿದೆ. "ನಾವು ಡಿಸೆಂಬರ್ 27 ರಂದು ಹೊಸ ವರ್ಷದ ಪ್ರವಾಸಿಗರಾಗಿ ರಷ್ಯಾಕ್ಕೆ ಭೇಟಿ ನೀಡಲು ಬಂದಿದ್ದೇವೆ ಮತ್ತು ನಮ್ಮನ್ನು ಬೆಲಾರಸ್‌ಗೆ ಕರೆದೊಯ್ದ ಏಜೆಂಟ್ ಅನ್ನು ಭೇಟಿಯಾದೆವು. ಬೆಲಾರಸ್ ತಲುಪಿದ ನಂತರ, ಅವರು (ಏಜೆಂಟ್) ಹಣಕ್ಕಾಗಿ ಬೇಡಿಕೆಯಿಟ್ಟರು. ನಾವು ಹೆಚ್ಚು ಹಣ ನೀಡದ ಕಾರಣ ಅವರು ನಮ್ಮನ್ನು ಅಲ್ಲಿಯೇ ತೊರೆದರು ಎಂದು ಮತ್ತೋರ್ವ ಯುವಕ ಹೇಳಿದ್ದಾನೆ.

"ರಷ್ಯಾದ ಸೈನ್ಯವು ನಮ್ಮನ್ನು ಹಿಡಿದು ಮೂರು ದಿನಗಳ ಕಾಲ ಕೋಣೆಯಲ್ಲಿ ಬಂಧಿಸಿತು. ಅವರು ಸಹಾಯಕರು, ಚಾಲಕರು ಮತ್ತು ಅಡುಗೆಯವರಾಗಿ ಕೆಲಸ ಮಾಡಲು ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದರು. ಒಪ್ಪಂದವು ಅವರ ಭಾಷೆಯಲ್ಲಿತ್ತು. ನಮಗೆ ಬೆದರಿಕೆ ಹಾಕಲಾಯಿತು. ನಾವು ಸಹಿ ಹಾಕಲು ನಿರಾಕರಿಸಿದರೆ ಜೈಲಿಗೆ ಹಾಕುತ್ತೇವೆ ಎಂದು ಬೆದರಿಸಿದರು ಆಗ ನಾವು ಯುದ್ಧದಲ್ಲಿ ರಷ್ಯಾಪರ ಹೋರಾಡಲು ತಳ್ಳಲ್ಪಟ್ಟಿದ್ದೇವೆ ಮೋಸ ಹೋಗಿದ್ದೇವೆ ಎಂಬುದು ಅರ್ಥವಾಯಿತು" ಎಂದು ಯುವಕರು ಹೇಳಿದ್ದಾರೆ.

ರಷ್ಯಾದಲ್ಲಿ ಸಿಲುಕಿರುವ ಭಾರತೀಯ ಯುವಕರು
ರಷ್ಯಾ ಜೊತೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದೆ: ಖರ್ಗೆ ಪತ್ರಕ್ಕೆ ವಿದೇಶಾಂಗ ಕಚೇರಿ ಪ್ರತಿಕ್ರಿಯೆ

"ನಮಗೆ ಕೆಲವು ತರಬೇತಿಯನ್ನು ನೀಡಲಾಯಿತು ಮತ್ತು ಯುಕ್ರೇನ್‌ನ ಯುದ್ಧ ನೆಲೆಗಳಿಗೆ ಕರೆದೊಯ್ಯಲಾಯಿತು. ನಮ್ಮ ಕೆಲವು ಸ್ನೇಹಿತರನ್ನು ಯುದ್ಧದ ಮುಂಚೂಣಿ ಪ್ರದೇಶಕ್ಕೆ ಕರೆದೊಯ್ಯಲಾಯಿತು.

ಶೀಘ್ರದಲ್ಲೇ ನಮ್ಮನ್ನೂ ಸಹ ಯುದ್ಧದ ಮುಂಚೂಣಿ ಪ್ರದೇಶಕ್ಕೆ ಕರೆದೊಯ್ಯಲಾಗುತ್ತದೆ. ನಮಗೆ ಬಂದೂಕುಗಳನ್ನು ಸರಿಯಾಗಿ ಹಿಡಿಯಲು ಸಹ ಸಾಧ್ಯವಿಲ್ಲ. ನಾವು ಯುದ್ಧಗಳನ್ನು ಮಾಡಲು ಬಯಸುವುದಿಲ್ಲ. ನಾವು ಹಿಂತಿರುಗಲು ಬಯಸುತ್ತೇವೆ, ನಾವು ಸಾವಿನ ದವಡೆಯಲ್ಲಿ ಸಿಲುಕಿದ್ದೇವೆ. ಭಾರತ ಸರ್ಕಾರ ನಮಗೆ ಸಹಾಯ ಮಾಡಬೇಕು ಎಂದು ಯುವಕರು ಮನವಿ ಮಾಡಿದ್ದಾರೆ.

ಪಂಜಾಬ್, ಹರಿಯಾಣ, ಕಾಶ್ಮೀರ, ಕರ್ನಾಟಕ, ಗುಜರಾತ್ ಮತ್ತು ತೆಲಂಗಾಣದಿಂದ ಇನ್ನೂ ಹೆಚ್ಚಿನ ಭಾರತೀಯರನ್ನು ಹೆಚ್ಚು ಹಣದ ಉತ್ತಮ ಉದ್ಯೋಗ ಕೊಡಿಸುವ ಭರವಸೆಯಲ್ಲಿ ಉಕ್ರೇನ್ ವಿರುದ್ಧ ಯುದ್ಧ ಮಾಡಲು ಮೋಸದಿಂದ ಕರೆದೊಯ್ಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com