ದೆಹಲಿ ಸಿಎಂ ಆಗಿ ಕೇಜ್ರಿವಾಲ್ ಮುಂದುವರಿಕೆ ಜನರಿಗೆ ಮಾಡಿದ ಅವಮಾನ, ಭ್ರಷ್ಟರು ಜೈಲಿಗೆ ಹೋಗುತ್ತಾರೆ: ಬಿಜೆಪಿ
ನವದೆಹಲಿ: ಈಗ ರದ್ದಾಗಿರುವ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ ಎಂಬ ಆಮ್ ಆದ್ಮಿ ಪಕ್ಷದ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಬಿಜೆಪಿ, ಇದು ಜನರಿಗೆ, ಕಾನೂನು ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಹೇಳಿದೆ.
ಕೇಜ್ರಿವಾಲ್ ಅವರು ಕಾನೂನಿಗಿಂತ ದೊಡ್ಡವರೇ? ಎಂದು ಪ್ರಶ್ನಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು, ಈ ವಿಷಯದಲ್ಲಿ ಎಎಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವವರು ಜೈಲಿಗೆ ಹೋಗುತ್ತಾರೆ ಎಂದು ಪ್ರತಿಪಾದಿಸಿದರು.
ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದ ನಾಯಕರು ದೆಹಲಿ ಮುಖ್ಯಮಂತ್ರಿಗೆ ಬೆಂಬಲ ನೀಡುತ್ತಿರುವುದು ಕಳ್ಳರ ನಡುವಿನ ಸಹೋದರತ್ವವನ್ನು ಪ್ರದರ್ಶಿಸುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಜಾರಿ ನಿರ್ದೇಶನಾಲಯದ(ಇಡಿ) ಕೇಜ್ರಿವಾಲ್ ಅವರಿಗೆ ಒಂಬತ್ತು ಬಾರಿ ಸಮನ್ಸ್‌ಗಳನ್ನು ನೀಡಿದೆ. ಆದರೂ ಅವರು ತನಿಖೆಗೆ ಸಹಕರಿಸಲು ನಿರಾಕರಿಸಿದ್ದಾರೆ ಎಂದು ಠಾಕೂರ್ ಹೇಳಿದರು.
ಕೇಜ್ರಿವಾಲ್ ಅವರು ತಾವು ಕಾನೂನಿಗಿಂತ ದೊಡ್ಡವರು ಎಂದು ಭಾವಿಸಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಅವರ ನಿರ್ಧಾರ ದೆಹಲಿ ಜನರಿಗೆ, ಕಾನೂನು ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಠಾಕೂರ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ