ಲೋಕಸಭಾ ಚುನಾವಣೆ 2024: ಕಂಗನಾ ರಣೌತ್, ಕೋಲ್ಕತ್ತಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶಗೆ ಬಿಜೆಪಿ ಟಿಕೆಟ್
ನವದೆಹಲಿ: ಬಿಜೆಪಿ ಲೋಕಸಭಾ ಚುನಾವಣೆ ಅಭ್ಯರ್ಥಿಗಳ 5 ನೇ ಪಟ್ಟಿ ಬಿಡುಗಡೆ ಮಾಡಿದ್ದು, ಕಂಗಣಾ ರಣೌತ್ ಹಾಗೂ ಕೋಲ್ಕತ್ತಾ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಟಿಕೆಟ್ ಘೋಷಿಸಿದೆ.
ರಣೌತ್ ಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಟಿಕೆಟ್ ನೀಡಿದ್ದರೆ, ನಿವೃತ್ತ ನ್ಯಾಯಾಧೀಶರಿಗೆ ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ. ಕೇಂದ್ರ ಸಚಿವರಾದ ಅಶ್ವಿನಿ ಕುಮಾರ್ ಚೌಬೆ, ವಿಕೆ ಸಿಂಗ್, ವರುಣ್ ಗಾಂಧಿ ಅವರ ಹೆಸರನ್ನು ಬಿಜೆಪಿ ಕೈಬಿಟ್ಟಿದೆ.
5ನೇ ಪಟ್ಟಿಯಲ್ಲಿ ಒಟ್ಟು 111 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಆಂಧ್ರಪ್ರದೇಶ, ಗೋವಾ, ಗುಜರಾತ್, ಹರ್ಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತೆಲಂಗಾಣ, ಸಿಕ್ಕೀಂ, ಒಡಿಶಾ, ಮಿಜೋರಾಮ್, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಜಾರ್ಖಂಡ್, ಹಿಮಾಚಲ ಪ್ರದೇಶಗಳ ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಂಬಾಲ್ಪುರ ಕ್ಷೇತ್ರದಿಂದ ಹಾಗೂ ಪುರಿ ಕ್ಷೇತ್ರದಿಂದ ಸಂಬಿತ್ ಪಾತ್ರ ಸ್ಪರ್ಧಿಸಿದ್ದಾರೆ.
ಮನೇಕಾ ಗಾಂಧಿ ಅವರನ್ನು ಸುಲ್ತಾನ್ ಪುರ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದ್ದರೆ, ಉತ್ತರ ಪ್ರದೇಶ ಸಚಿವ ಜಿತಿನ್ ಪ್ರಸಾದ್ ಅವರನ್ನು ವರುಣ್ ಗಾಂಧಿ ಬದಲಾಗಿ ಫಿಲಿಬಿಟ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಜಾರ್ಖಂಡ್ ನ ದುಮ್ಕಾ ಕ್ಷೇತ್ರದಿಂದ ಸೀತಾ ಸೊರೇನ್ ಸ್ಪರ್ಧಿಸಲಿದ್ದಾರೆ.
ಉತ್ತರ ಕನ್ನಡ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಪಕ್ಷ ಕೈಬಿಟ್ಟಿದೆ. ಜನಪ್ರಿಯ ಟಿವಿ ಧಾರಾವಾಹಿ ರಾಮಾಯಣದಲ್ಲಿ ರಾಮನಾಗಿ ನಟಿಸಿದ್ದ ನಟ ಅರುಣ್ ಗೋವಿಲ್ ಅವರನ್ನು ಮೀರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ