ಅಹ್ಮದಾಬಾದ್: 1996 ರಲ್ಲಿ ಡ್ರಗ್ಸ್ ಜಪ್ತಿ ಮಾಡಿದ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ದೋಷಿ ಎಂದು ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಪಾಲಂಪುರ ಟೌನ್ ನ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಶಿಕ್ಷೆಯ ಪ್ರಮಾಣವನ್ನು ಗುರುವಾರ ಮಧ್ಯಾಹ್ನ ಪ್ರಕಟಿಸುವ ಸಾಧ್ಯತೆ ಇದೆ. 1996 ರಲ್ಲಿ ವಕೀಲರು ತಂಗಿದ್ದ ಪಾಲನ್‌ಪುರದ ಹೋಟೆಲ್ ಕೊಠಡಿಯಿಂದ ಪೊಲೀಸರು ಡ್ರಗ್ಸ್ ವಶಪಡಿಸಿಕೊಂಡಿದ್ದರು ಎಂದು ಹೇಳುವ ಮೂಲಕ ರಾಜಸ್ಥಾನ ಮೂಲದ ವಕೀಲರನ್ನು ತಪ್ಪಾಗಿ ಸಿಲುಕಿಸಿದ ಆರೋಪದ ಮೇಲೆ ಸೆಷನ್ಸ್ ನ್ಯಾಯಾಲಯ ಭಟ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ.
ಸಂಜೀವ್ ಭಟ್ ಅವರನ್ನು 2015 ರಲ್ಲಿ ಐಪಿಎಸ್ ನಿಂದ ವಜಾಗೊಳಿಸಲಾಗಿತ್ತು. ವಜಾಗೊಳ್ಳುವುದಕ್ಕೂ ಮುನ್ನ ಸಂಜೀವ್ ಭಟ್ ಬನಸ್ಕಾಂತ ಜಿಲ್ಲೆಯ ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ನೇತೃತ್ವದ ಜಿಲ್ಲಾ ಪೊಲೀಸರು ರಾಜಸ್ಥಾನದ ವಕೀಲ ಸುಮೇರ್‌ಸಿಂಗ್ ರಾಜಪುರೋಹಿತ್ ಅವರನ್ನು 1996 ರಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ ಕಾಯ್ದೆ (ಎನ್‌ಡಿಪಿಎಸ್ ಆಕ್ಟ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದರು. ವಕೀಲರು ತಂಗಿದ್ದ ಪಾಲನ್‌ಪುರದ ಹೋಟೆಲ್ ಕೊಠಡಿಯಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.
ಆದಾಗ್ಯೂ, ರಾಜಸ್ಥಾನದ ಪಾಲಿಯಲ್ಲಿರುವ ವಿವಾದಿತ ಆಸ್ತಿಯನ್ನು ವರ್ಗಾಯಿಸಲು ಒತ್ತಾಯಿಸಲು ಬನಸ್ಕಾಂತ ಪೊಲೀಸರು ರಾಜಪುರೋಹಿತ್ ಅವರನ್ನು ತಪ್ಪಾಗಿ ಸಿಲುಕಿಸಿದ್ದಾರೆ ಎಂದು ರಾಜಸ್ಥಾನ ಪೊಲೀಸರು ವಾದಿಸಿದ್ದರು.
ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಐಬಿ ವ್ಯಾಸ್ ಅವರು 1999 ರಲ್ಲಿ ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದರು.
Advertisement