ನವದೆಹಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಏಪ್ರಿಲ್ 6 ರಂದು ಜೈಪುರ ಮತ್ತು ಹೈದರಾಬಾದ್‌ನಲ್ಲಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿ ಮಾತನಾಡಲಿದ್ದು, ಅಲ್ಲಿ ಅವರು ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ತಿಳಿಸಲಿದ್ದಾರೆ.
ಮೂಲಗಳ ಪ್ರಕಾರ, ಏಪ್ರಿಲ್ 5 ರಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪಕ್ಷದ ನಾಯಕರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಕಾಂಗ್ರೆಸ್‌ನ ಪ್ರಣಾಳಿಕೆಯು 2024ರ ಲೋಕಸಭಾ ಚುನಾವಣೆಯ ಚುನಾವಣಾ ಭರವಸೆಗಳ ಭಾಗವಾಗಿ ಜನರಿಗೆ 'ಪಂಚ ನ್ಯಾಯ' ಅಥವಾ 'ಯುವ ನ್ಯಾಯ', 'ನಾರಿ ನ್ಯಾಯ', 'ಕಿಸಾನ್ ನ್ಯಾಯ', 'ಶ್ರಮಿಕ್ ನ್ಯಾಯ' ಮತ್ತು 'ಹಿಸ್ಸೆದಾರಿ ನ್ಯಾಯ' ಸೇರಿದಂತೆ ನ್ಯಾಯದ ಐದು ಆಧಾರ ಸ್ತಂಭಗಳ ಮೇಲೆ ಒತ್ತು ನೀಡಲಿದೆ.
ಕಾಂಗ್ರೆಸ್ ತನ್ನ 'ಘರ್ ಘರ್ ಗ್ಯಾರಂಟಿ' ಅಭಿಯಾನವನ್ನು ಏಪ್ರಿಲ್ 3 ರಂದು ಪ್ರಾರಂಭಿಸಲಿದ್ದು, ಪಕ್ಷದ ನಾಯಕರು ದೇಶಾದ್ಯಂತ ಎಂಟು ಕೋಟಿಗೂ ಹೆಚ್ಚು ಮನೆಗಳನ್ನು ತಲುಪಲಿದ್ದಾರೆ. ಈ ಅಭಿಯಾನವು ಸಾಮಾಜಿಕ ಮಾಧ್ಯಮ ಮತ್ತು ಚಾನೆಲ್ ಗಳ ಮೇಲೆ ಹೆಚ್ಚು ಗಮನಹರಿಸಲಿದ್ದು, ಮುದ್ರಣ ಮತ್ತು ಹೊರಾಂಗಣ ಪ್ರಚಾರದ ಮೇಲೆ ಕಡಿಮೆ ಕೇಂದ್ರೀಕರಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪಕ್ಷವು ಕಾಂಗ್ರೆಸ್‌ನ ಚುನಾವಣಾ ಚಿಹ್ನೆಯನ್ನು ಉಲ್ಲೇಖಿಸಿ ತನ್ನ ಹೊಸ ಘೋಷಣೆ # HaathBadlega Halaatಯನ್ನು ಈಗಾಗಲೇ ಪ್ರಾರಂಭಿಸಿದೆ.
Advertisement