ನವದೆಹಲಿ: ಚುನಾವಣಾ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆಗಳು, ಆ ಹೇಳಿಕೆ ಮೇಲೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಈ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣದ ಭರದಲ್ಲಿ ನೀಡಿರುವ ಹೇಳಿಕೆಯೊಂದು ವಿವಾದಕ್ಕೀಡಾಗಿದೆ.
ಛತ್ತೀಸ್‌ಗಡದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶಿವಕುಮಾರ್ ದಹಾರಿಯಾ ಪರ ಪ್ರಚಾರದ ವೇಳೆ ಶಿವಕುಮಾರ್ ಅವರನ್ನು ಭಗವಾನ್ ಶಿವನಿಗೆ ಹೋಲಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ್ ಅವರು ಸಾಕ್ಷತ್ ಶಿವನಂತೆ. ಅವರು ಬಹಳ ಸುಲಭವಾಗಿ ರಾಮ(ಬಿಜೆಪಿ)ನ ಜೊತೆ ಸ್ಪರ್ಧೆಗಿಳಿಯಬಹುದು. ನನ್ನ ಹೆಸರು ಕೂಡ ಮಲ್ಲಿಕಾರ್ಜುನ. ಅಂದರೆ ಶಿವ ಎಂದರ್ಥ. ನಾನು ಕೂಡ ಶಿವನೇ ಆಂಧ‍್ರ ಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ಎಂಬ ಹೆಸರಿನಲ್ಲಿ ಜ್ಯೋತಿರ್ಲಿಂಗ ಇದೆ ಎಂದು ಹೇಳಿದ್ದರು.
ಖರ್ಗೆ ಹೇಳಿಕೆಗೆ ವೈರಲ್ ಆಗುತ್ತಿದ್ದಂತೆ ಇದೇ ವಿಚಾರವನ್ನು ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಛತ್ತೀಸ್‌ಗಡದ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ರಾಮನನ್ನು ತಮ್ಮ ಶತ್ರು ಎಂದು ಭಾವಿಸಿದೆ ಎಂಬುದನ್ನು ಖರ್ಗೆ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಆದರೆ ಸ್ವತಃ ಶಿವನೇ ಶ್ರೀರಾಮನನ್ನು ತನ್ನ ದೇವರು ಎಂದು ಭಾವಿಸಿದ್ದ ಎಂಬುದು ಕಾಂಗ್ರೆಸಿಗರಿಗೆ ತಿಳಿದಿಲ್ಲ. ಕಾಂಗ್ರೆಸ್ ಪಕ್ಷ ಶ್ರೀರಾಮನ ಅಸ್ತಿತ್ವವನ್ನು ಆಗಾಗ ಪ್ರಶ್ನಿಸುತ್ತಲೇ ಬಂದಿದೆ. ಇದೇ ಖರ್ಗೆಯ ಪುತ್ರ ಪ್ರಿಯಾಂಕ್ ಖರ್ಗೆ ಶ್ರೀ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಆಹ್ವಾನವನ್ನು ತಿರಸ್ಕರಿಸಿದ್ದರು. ಅಲ್ಲದೇ ಸನಾತನ ಧರ್ಮವನ್ನು ನಾಶ ಮಾಡುವುದಾಗಿ ಹೇಳಿಕೆ ನೀಡಿದ್ದವರಿಗೆ ಬೆಂಬಲ ಸೂಚಿಸಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್ ಇದೀಗ ಸಂಕಷ್ಟ ಎದುರಿಸುತ್ತಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಛತ್ತೀಸ್‌ಗಡದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಮಲ್ಲಿಕಾರ್ಜುನ ಖರ್ಗೆಯವರು ಭಗವಾನ್ ಶಿವನ ಬಗ್ಗೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement