ನವದೆಹಲಿ: ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ಅಶ್ಲೀಲ ವಿಡಿಯೋಗಳು ಬಹಿರಂಗವಾದ ಬೆನ್ನಲ್ಲೇ ವಿದೇಶಕ್ಕೆ ಹಾರಿರುವ ಅಮಾನತುಗೊಂಡ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ಪ್ರಯಾಣಿಸಲು ಯಾವುದೇ ರಾಜಕೀಯ ಅನುಮತಿ ಕೋರಿಲ್ಲ ಅಥವಾ ಅನುಮತಿ ನೀಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಗುರುವಾರ ಸ್ಪಷ್ಟಪಡಿಸಿದೆ.
ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರು ಜರ್ಮನಿಗೆ ಪ್ರಯಾಣಿಸಲು ಯಾವುದೇ ವೀಸಾ ಅಗತ್ಯವಿಲ್ಲ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗುವಂತೆ ಹೇಳಿದ್ಯಾರು? ವೀಸಾ ಇಲ್ಲದೇ ದಿಢೀರ್ ವಿದೇಶಕ್ಕೆ ಹೋಗಿದ್ದೇಗೆ? ಪ್ರಜ್ವಲ್ ವಿದೇಶಕ್ಕೆ ತೆರಳಲು ಕೇಂದ್ರ ಸರ್ಕಾರವೇ ಸಹಾಯ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ.
ಇದರ ಬೆನ್ನಲ್ಲೇ ವಿದೇಶಾಂಗ ಸಚಿವಾಲಯವು ಸ್ಪಷ್ಟನೆ ನೀಡಿದ್ದು, ವಿದೇಶಕ್ಕೆ ತೆರಳಲು ಸಚಿವಾಲಯದಿಂದ ಯಾವುದೇ ಅನುಮತಿ ಕೇಳಿರಲಿಲ್ಲ. ವಿದೇಶಾಂಗ ಇಲಾಖೆಯಿಂದ ಯಾವುದೇ ವೀಸಾ ನೋಟ್ ಕೂಡ ನೀಡಿಲ್ಲ. ಬದಲಾಗಿ ಅವರು ರಾಜತಾಂತ್ರಿಕ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. ಇದರೊಂದಿಗೆ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಮೂಲಕ ಜರ್ಮನಿಗೆ ಹಾರಿರುವುದು ಖಚಿತವಾಗಿದೆ.
ಪ್ರಜ್ವಲ್ ರೇವಣ್ಣ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ಹೋಗಿರುವುದು ಗೊತ್ತಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
Advertisement