
ಸಾಗರ್: ಮಧ್ಯಪ್ರದೇಶದ ಬಿನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಿರ್ಮಲಾ ಸಪ್ರೆ ಅವರು ಭಾನುವಾರ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನಿರ್ಮಲಾ ಸಪ್ರೆ ಅವರು ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮೂರನೇ ಶಾಸಕಿಯಾಗಿದ್ದಾರೆ.
ಸಪ್ರೆ ಅವರು ಸಾಗರ್ ಜಿಲ್ಲೆಯ ರಹತ್‌ಗಢದಲ್ಲಿ ಇಂದು ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷ ಸೇರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಪ್ರೆ, ತಮ್ಮ ಕ್ಷೇತ್ರದ ಜನತೆಗೆ ಹಲವಾರು ಭರವಸೆಗಳನ್ನು ನೀಡಿದ್ದರೂ ಈಡೇರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪ್ರಸ್ತುತ ಅಧಿಕಾರದಿಂದ ಹೊರಗಿದೆ. ವಿರೋಧ ಪಕ್ಷವು ಅಭಿವೃದ್ಧಿಯ ಯಾವುದೇ ಅಜೆಂಡಾವನ್ನು ಹೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನೇತೃತ್ವದಲ್ಲಿ ನಾನು ಅಭಿವೃದ್ಧಿಯ ಹೊಳೆಗೆ ಸೇರಿಕೊಂಡಿದ್ದೇನೆ ಎಂದು ಸಪ್ರೆ ಹೇಳಿದ್ದಾರೆ.
ಚುನಾವಣಾ ಆಯೋಗವು ಮಾರ್ಚ್ 16 ರಂದು ಲೋಕಸಭೆ ಚುನಾವಣೆ ದಿನಾಂಕ ಘೋಷಿಸಿದ ನಂತರ ಮಾರ್ಚ್ 29 ರಂದು, ಛಿಂದ್ವಾರಾ ಜಿಲ್ಲೆಯ ಅಮರವಾರದ ಶಾಸಕ ಕಮಲೇಶ್ ಶಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.
ಏಪ್ರಿಲ್ 30 ರಂದು ಕಾಂಗ್ರೆಸ್ ಶಾಸಕ ರಾಮ್ ನಿವಾಸ್ ರಾವತ್ ಅವರು ಅತ್ಯಂತ ಹಳೆಯ ಪಕ್ಷವನ್ನು ತೊರೆದು ಬಿಜೆಪಿ ಸೇರಿದರು.
Advertisement