ಅಪ್ರಾಪ್ತ ಮಗನಿಂದ ಇವಿಎಂ ಬಟನ್ ಒತ್ತಿಸಿದ ಬಿಜೆಪಿ ನಾಯಕನ ವಿರುದ್ಧ ಕೇಸ್ ದಾಖಲು
ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಾರತೀಯ ಜನತಾ ಪಕ್ಷದ ನಾಯಕನೊಬ್ಬ ಮೇ 7 ರಂದು ಬೆರಾಸಿಯಾದಲ್ಲಿನ ಮತಗಟ್ಟೆಯಲ್ಲಿ ತನ್ನ ಅಪ್ರಾಪ್ತ ಮಗನಿಂದ ಇವಿಎಂ ಬಟನ್ ಒತ್ತಿಸಿದ ಮತ್ತು ಪ್ರಕ್ರಿಯೆಯನ್ನು ವೀಡಿಯೊ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಭೋಪಾಲ್ ಕಲೆಕ್ಟರ್ ಕೌಶಲೇಂದ್ರ ವಿಕ್ರಮ್ ಸಿಂಗ್ ಅವರು, ಪ್ರಕರಣ ಸಂಬಂಧ ಮತಗಟ್ಟೆ ಸಂಖ್ಯೆ 71(ಖಿತ್ವಾಸ್)ರ ಮತಗಟ್ಟೆ ಅಧಿಕಾರಿ ಸಂದೀಪ್ ಸೈನಿ ಅವರನ್ನು ಅಮಾನತುಗೊಳಿಸಿದ್ದಾರೆ ಮತ್ತು ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ವಿಜಯ್ ಮೆಹರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಲೆಕ್ಟರ್ ಸಿಂಗ್ ಅವರು ಎಕ್ಸ್‌ನಲ್ಲಿ ಮೆಹರ್ ಅವರ ವೀಡಿಯೊವನ್ನು ಗಮನಿಸಿದ ನಂತರ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ಘಟನೆಯನ್ನು ಟೀಕಿಸಿದ್ದ ಮಧ್ಯ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಪಿಯೂಷ್ ಬಾಬೆಲೆ ಅವರು, X ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು ಮತ್ತು ಇದು ಚುನಾವಣಾ ಪ್ರಕ್ರಿಯೆಯ ಅಣಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮೆಹರ್ ಅವರು ಮತದಾನ ಪ್ರಕ್ರಿಯೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಬಾಬೆಲೆ ಅವರು ಹೇಳಿದ್ದರು.