ಚುನಾವಣಾ ಪ್ರಚಾರ ಮೂಲಭೂತ, ಸಾಂವಿಧಾನಿಕ ಹಕ್ಕಲ್ಲ: ಕೇಜ್ರಿವಾಲ್ ಮಧ್ಯಂತರ ಜಾಮೀನಿಗೆ ಇಡಿ ವಿರೋಧ
ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವುದನ್ನು ಗುರುವಾರ ಸುಪ್ರೀಂಕೋರ್ಟ್ ನಲ್ಲಿ ವಿರೋಧಿಸಿದ ಇಡಿ ಚುನಾವಣಾ ಪ್ರಚಾರ ಮೂಲಭೂತ, ಸಾಂವಿಧಾನಿಕ ಅಥವಾ ಕಾನೂನುಬದ್ಧ ಹಕ್ಕಲ್ಲ ಎಂದು ಹೇಳಿದೆ.
ಯಾವುದೇ ರಾಜಕೀಯ ನಾಯಕರಿಗೆ ಚುನಾವಣಾ ಪ್ರಚಾರಕ್ಕಾಗಿ ಜಾಮೀನು ನೀಡಿಲ್ಲ. ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿದರೆ ತಪ್ಪು ನಡವಳಿಕೆಗೆ ಕಾರಣವಾಗುತ್ತದೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಬುಧವಾರ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮಧ್ಯಂತರ ಜಾಮೀನಿಗೆ ಸಂಬಂಧಿಸಿದ ಆದೇಶವನ್ನು ಶುಕ್ರವಾರ ನೀಡಲಿದ್ದೇವೆ. ಬಂಧನವನ್ನು ಪ್ರಶ್ನಿಸಿರುವ ಪ್ರಮುಖ ಅರ್ಜಿಯನ್ನು ಕೂಡಾ ಅದೇ ದಿನ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21 ರಂದು ಇಡಿಯಿಂದ ಬಂಧಿಸಲ್ಪಟ್ಟ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಸ್ತುತ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಮೇ 7 ರಂದು, ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು.


