
ರಾಯ್ ಬರೇಲಿ: ನನ್ನ ಮಗನನ್ನು ನಿಮ್ಮ ಕೈಗೆ ನೀಡುತ್ತಿದ್ದೇನೆ. ನಾನು ನೀಡಿದ ಪ್ರೀತಿಯನ್ನು ಅವನಿಗೆ ನೀವು ನೀಡಿ ಎಂದು ರಾಹುಲ್ ಗಾಂಧಿ ಪರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಚಾರ ನಡೆಸಿದ್ದಾರೆ.
ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡಿದರು. ನಮ್ಮ ಕುಟುಂಬದ ಬೇರುಗಳು ಈ ನೆಲದ ಮಣ್ಣಿನೊಂದಿಗೆ ಸಂಪರ್ಕ ಹೊಂದಿವೆ. ಈ ಸಂಬಂಧವು ಗಂಗಾ ಮಾತೆಯಷ್ಟು ಪರಿಶುದ್ಧವಾಗಿದೆ. ನಮ್ಮ ಸಂಬಂಧವು ಅವಧ್ ಮತ್ತು ರಾಯ್‌ಬರೇಲಿಯ ರೈತರ ಆಂದೋಲನದಿಂದ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. ರಾಯ್‌ಬರೇಲಿಯ ಜನರಿಗೆ ನನ್ನ ಮಗನನ್ನು ನೀಡುತ್ತಿದ್ದೇನೆ. ರಾಹುಲ್ ಗಾಂಧಿ ನಿಮಗೆ ನಿರಾಸೆಯನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.
20 ವರ್ಷಗಳ ಕಾಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಿದ ಸೋನಿಯಾ ರಾಯ್‌ಬರೇಲಿ ನನ್ನ ಜೀವನದ ಅತಿ ದೊಡ್ಡ ಅಸ್ತಿ ಎಂದು ಹೇಳಿದ್ದಾರೆ. ನನ್ನ ಸರ್ವಸ್ವವನ್ನು ನಿಮಗಾಗಿ ನೀಡಿದ್ದೇನೆ. ಆದ್ದರಿಂದ ಸಹೋದರ, ಸಹೋದರಿಯರೇ, ನಿಮಗೀಗ ನನ್ನ ಮಗನನ್ನು ನೀಡುತ್ತಿದ್ದೇನೆ. ನನ್ನ ಮಗನನ್ನು ತಮ್ಮವನೆಂದು ಸ್ವೀಕರಿಸಿ' ಎಂದು ಜನರಲ್ಲಿ ವಿನಂತಿ ಮಾಡಿದ್ದಾರೆ.
ಸೋನಿಯಾ ಗಾಂಧಿ ಭಾವನಾತ್ಮಕ ಭಾಷಣದ ವೇಳೆ ವೇದಿಕೆಯಲ್ಲಿ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗಿದ್ದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಹ ಉಪಸ್ಥಿತರಿದ್ದರು. 2004ರಿಂದ ರಾಯ್‌ಬರೇಲಿ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಧಿಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಸಭೆ ಸಂಸದೆಯಾಗಿ ಆಯ್ಕೆಯಾದ ಬಳಿಕ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಈ ಬಾರಿ ಈ ಕ್ಷೇತ್ರದಿಂದ ರಾಹುಲ್ ಗಾಂಧಿ ಕಣಕ್ಕಿಳಿದಿದ್ದಾರೆ.
Advertisement