
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷ ಭಾನುವಾರ ಬಿಜೆಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರಕ್ಕೆ ಬಂದಿದೆ.
ಈ ಕುರಿತು ಶನಿವಾರ ಮಾಹಿತಿ ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ನಾನು ಮತ್ತು ಇತರ ಎಎಪಿ ನಾಯಕರು ಮಾರ್ಚ್ 19 ರಂದು ಬಿಜೆಪಿ ಕೇಂದ್ರ ಕಚೇರಿಗೆ ಹೋಗುತ್ತೇವೆ. ಪ್ರಧಾನಿ ಮೋದಿ ಅವರು ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು ಎಂದು ಹೇಳಿದ್ದಾರೆ.
ತಮ್ಮ ಸಹಾಯಕ ಬಿಭವ್ ಕುಮಾರ್ ಅವರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಎಎಪಿ ಸಂಸದ ರಾಘವ್ ಚಡ್ಡಾ ಮತ್ತು ದೆಹಲಿ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರನ್ನೂ ಜೈಲಿಗೆ ಕಳುಹಿಸುವುದಾಗಿ ಬಿಜೆಪಿ ಹೇಳುತ್ತಿದೆ ಎಂದರು.
ನಮ್ಮ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ತಮ್ಮ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಎಎಪಿ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಅವರಂತೆ ಇತರ ಎಎಪಿ ನಾಯಕರನ್ನು ಜೈಲಿಗೆ ಕಳುಹಿಸಿದ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ ಕೇಜ್ರಿವಾಲ್, ನಮ್ಮ ಪಕ್ಷದ ಎಲ್ಲಾ ಪ್ರಮುಖ ಮುಖಂಡರು, ಸಂಸದರು, ಶಾಸಕರು, ದೆಹಲಿಯ ಬಿಜೆಪಿಯ ಪ್ರಧಾನ ಕಚೇರಿಗೆ ನಾಳೆ(ಮೇ 19) ಮಧ್ಯಾಹ್ನ ಹನ್ನೆರಡು ಗಂಟೆಗೆ ಹೋಗಲಿದ್ದೇವೆ. ಯಾರನ್ನೆಲ್ಲಾ ಬಂಧಿಸಬೇಕು ಎಂದು ಬಿಜೆಪಿ ಯೋಜನೆ ಹಾಕಿಕೊಂಡಿದಿಯೋ ಅವರನ್ನೆಲ್ಲಾ ನಿಮ್ಮ ಕಚೇರಿಯಲ್ಲಿಯೇ ಬಂಧಿಸಬಹುದು" ಎಂದಿದ್ದಾರೆ.
ಬಿಜೆಪಿಯವರು ಆಮ್ ಆದ್ಮಿ ಪಕ್ಷದ ವಿರುದ್ಧ ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ. ನನ್ನನ್ನು, ಸಿಸೋಡಿಯಾ, ಸಂಜಯ್ ಸಿಂಗ್, ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಕಳುಹಿಸಿದರು. ಇಂದು ನನ್ನ ಆಪ್ತನನ್ನೂ ಜೈಲಿಗೆ ಹಾಕಿದ್ದಾರೆ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದರು.
Advertisement