
ನವದೆಹಲಿ: ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶುಕ್ರವಾರ ಕೋರ್ಟ್ ನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಬಿಭವ್ ಕುಮಾರ್ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಅವರನ್ನು ತೀಸ್ ಹಜಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್, ಬಿಭವ್ ಕುಮಾರ್ ಅವರನ್ನು 4 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬಿಭವ್ ಕುಮಾರ್ ಪರ ವಕೀಲರು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಡಿವಿಆರ್‌ಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸಲು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಸಿಸಿಟಿವಿಗಳು ನನ್ನ ಪ್ರಕರಣವನ್ನು ಸಾಬೀತುಪಡಿಸುತ್ತವೆ. ಅವರು ಹಲವಾರು ಬಾರಿ ಹುಡುಕಿ ಸಿಸಿಟಿವಿ ದೃಶ್ಯಗಳನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ ಎಷ್ಟು ದೃಶ್ಯಗಳಿವೆ ಎಂಬುದು ನಮಗೆ ತಿಳಿದಿಲ್ಲ. ದೃಶ್ಯಾವಳಿಗಳನ್ನು ಸಂರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಕುಮಾರ್ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.
ಮುಖ್ಯಮಂತ್ರಿಗಳ ನಿವಾಸದಲ್ಲಿ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸ್ವಾತಿ ಮಲಿವಾಲ್ ಅವರು ಮೇ 13 ರಂದು ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಮೇ 18 ರಂದು ದೆಹಲಿ ಸಿಎಂ ಆಪ್ತ ಕಾರ್ಯದರ್ಶಿಯನ್ನು ಬಂಧಿಸಲಾಯಿತು.
Advertisement