
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಭಯೋತ್ಪಾದಕರು, ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟುಮಾಡುವುದು, ತೊಂದರೆ ನೀಡುವವವರ ಕುಟುಂಬ ಸದಸ್ಯರಿಗೆ ಮತ್ತು ನಿಕಟವರ್ತಿಗಳಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಠಿಣ ಸಂದೇಶ ರವಾನಿಸಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಕೇವಲ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡಿರುವುದು ಮಾತ್ರವಲ್ಲದೆ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಮುಂದಾಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಭಯೋತ್ಪಾದಕ ಘಟನೆಗಳು ಬಹಳಷ್ಟು ಕಡಿಮೆಯಾಗಿದೆ.
ಕಾಶ್ಮೀರದಲ್ಲಿ, ಯಾರಾದರೂ ಭಯೋತ್ಪಾದಕ ಸಂಘಟನೆಗೆ ಸೇರಿದರೆ, ಅವರ ಕುಟುಂಬದ ಸದಸ್ಯರಿಗೆ ಯಾವುದೇ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂಬ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಅದೇ ರೀತಿ ಯಾರಾದರೂ ಕಲ್ಲು ತೂರಾಟದಲ್ಲಿ ತೊಡಗಿದರೆ ಅವರ ಕುಟುಂಬದ ಸದಸ್ಯರಿಗೂ ಸರ್ಕಾರಿ ನೌಕರಿ ಸಿಗುವುದಿಲ್ಲ ಎಂದು ಶಾ ಹೇಳಿದ್ದಾರೆ.
ಕೆಲವು ಮಾನವ ಹಕ್ಕುಗಳ ಕಾರ್ಯಕರ್ತರು ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋದರು ಆದರೆ, ಅಂತಿಮವಾಗಿ ಸರ್ಕಾರವು ಮೇಲುಗೈ ಸಾಧಿಸಿತು ಎಂದರು. ಕುಟುಂಬದಿಂದ ಯಾರಾದರೂ ಮುಂದೆ ಬಂದು ತನ್ನ ಹತ್ತಿರದ ಸಂಬಂಧಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದರೆ ಸರ್ಕಾರವು ವಿನಾಯಿತಿ ನೀಡುತ್ತದೆ ಎಂದು ಗೃಹ ಸಚಿವರು ಹೇಳಿದರು. ಅಂತಹ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದರು.
ಒಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಸುತ್ತುವರೆದಾಗ, ಮೊದಲು ಶರಣಾಗಲು ಅವಕಾಶ ನೀಡಲಾಗುತ್ತದೆ. ಭಯೋತ್ಪಾದಕನಿಗೆ ಶರಣಾಗುವಂತೆ ಅವರಿಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಮನವಿ ಮಾಡುವಂತೆ ಕೇಳಿಕೊಳ್ಳುತ್ತೇವೆ ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಸರ್ಕಾರವು ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡಿರುವುದು ಮಾತ್ರವಲ್ಲದೆ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿದೆ ಎಂದರು.
Advertisement