
ಚಂಡೀಗಢ: 2024ರ ಲೋಕಸಭೆ ಚುನಾವಣೆಯ ಕೊನೆಯ ಹಾಗೂ ಏಳನೇ ಹಂತದ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬಿದ್ದಿದ್ದು, ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ ತನ್ನನ್ನು ಮರು ಆಯ್ಕೆ ಮಾಡಲು ಮನಸ್ಸು ಮಾಡಿದೆ ಎಂದು ಗುರುವಾರ ಹೇಳಿದ್ದಾರೆ.
ಇಂದು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಮುಕ್ತಾಯಗೊಳಿಸಿದ ಪ್ರಧಾನಿ ಮೋದಿ, ಬಿಜೆಪಿಯ ಮೂರನೇ ಅವಧಿಯ ಮೊದಲ 125 ದಿನಗಳ ಮಾರ್ಗಸೂಚಿ ಸಿದ್ಧಗೊಂಡಿದೆ ಎಂದು ಹೇಳಿದ್ದಾರೆ.
ಜೂನ್ 1 ರಂದು ನಡೆಯಲಿರುವ 7ನೇ ಹಂತದ ಮತದಾನಕ್ಕೆ ಮುನ್ನ ಹೋಶಿಯಾರ್‌ಪುರದ ಪಕ್ಷದ ಅಭ್ಯರ್ಥಿ ಅನಿತಾ ಸೋಮ್ ಪ್ರಕಾಶ್ ಮತ್ತು ಆನಂದಪುರ ಸಾಹಿಬ್ ಕ್ಷೇತ್ರದ ಅಭ್ಯರ್ಥಿ ಡಾ ಸುಬಾಷ್ ಶರ್ಮಾ ಅವರ ಪ್ರಚಾರ ಮಾಡಿದ ಮೋದಿ, "ನಾನು ಇಡೀ ದೇಶಕ್ಕೆ ಭೇಟಿ ನೀಡಿದ್ದೇನೆ ಮತ್ತು ಮೂರನೇ ಬಾರಿಗೆ ಮೋದಿ ಸರ್ಕಾರವನ್ನು ಆಯ್ಕೆ ಮಾಡಲು ಜನರು ನಿರ್ಧರಿಸಿದ್ದಾರೆ. ದಶಕಗಳ ನಂತರ ನಾವು ಕೇಂದ್ರದಲ್ಲಿ ಪೂರ್ಣ ಬಹುಮತದೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಿದ್ದೇವೆ. 21ನೇ ಶತಮಾನ ಭಾರತದ ಶತಮಾನ ಆಗಿದೆ. ‘ದಮ್ದಾರ್ ಸರ್ಕಾರ್ (ಸದೃಢ ಸರ್ಕಾರ) ಮರಳಿ ಬರುತ್ತಿದೆ" ಎಂದರು.
"ನಾವು ಈಗಾಗಲೇ ಅಧಿಕಾರಕ್ಕೆ ಬಂದ ನಂತರ ಮಾಡಬೇಕಾದ ಕೆಲಸಗಳಿಗೆ ಆದ್ಯತೆ ನೀಡಿದ್ದೇವೆ. ಈಗಾಗಲೇ 125 ದಿನಗಳ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಮೊದಲ ತ್ರೈಮಾಸಿಕವನ್ನು ಯುವಕರಿಗೆ ಸಮರ್ಪಿಸಲಾಗುವುದು. ಐದು ವರ್ಷಗಳಲ್ಲಿ ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರಗಳು ಮತ್ತು ಮುಂದಿನ 25 ವರ್ಷಗಳವರೆಗೆ ನವ ಭಾರತವನ್ನು ಮಾಡುವ ದೃಷ್ಟಿಕೋನವನ್ನು ನಾವು ಹೊಂದಿದ್ದೇವೆ ಎಂದು ಮೋದಿ ಹೇಳಿದರು.
ಕಳೆದ 10 ವರ್ಷಗಳಲ್ಲಿ, ಮೋದಿ ಅವರು ರಾಷ್ಟ್ರದ ಶತ್ರುಗಳನ್ನು ಹೊಡೆದುರುಳಿಸುವ ಮತ್ತು ಭಾರತವನ್ನು ಸಮೃದ್ಧ ಮತ್ತು ಸ್ವಾವಲಂಬಿಯಾಗಿಸುವ ದೃಢವಾದ ಸರ್ಕಾರವನ್ನು ನೀಡಿದ್ದಾರೆ. ನಮ್ಮ ಸರ್ಕಾರವು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ಗಾಗಿ ‘ಕರಮ್ ಹಿ ಧರಮ್ ಹೈ’ (ಸೇವೆಯೇ ಧರ್ಮ) ಎಂಬ ಉದ್ದೇಶದಿಂದ ಕೆಲಸ ಮಾಡಿದೆ ಎಂದು ಪ್ರಧಾನಿ ತಿಳಿಸಿದರು.
ಪ್ರತಿಪಕ್ಷಗಳು ಎಸ್‌ಸಿ, ಹಿಂದುಳಿದ ಮತ್ತು ಬುಡಕಟ್ಟು ಜನಾಂಗದವರಿಗೆ ನೀಡಲಾಗಿರುವ ಮೀಸಲಾತಿಯನ್ನು ಕಿತ್ತುಕೊಳ್ಳಲು ಮುಂದಾಗಿವೆ ಎಂದು ಮೋದಿ ಮತ್ತೊಮ್ಮೆ ಆರೋಪಿಸಿದರು.
Advertisement