ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಉತ್ತರ ಪ್ರದೇಶದ ಇಬ್ಬರು ಕಾರ್ಮಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಮಧ್ಯ ಕಾಶ್ಮೀರದ ಮಗಮ್‌ನ ಮಜಮಾ ಪ್ರದೇಶದಲ್ಲಿ ಗುಂಡು ಹಾರಿಸಿದ ನಂತರ ಸುಫಿಯಾನ್ ಮತ್ತು ಉಸ್ಮಾನ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ಚುನಾಯಿತ ಸರ್ಕಾರ ರಚನೆಯಾದ ನಂತರ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ನಡೆಸಿದ ಐದನೇ ದಾಳಿ ಇದಾಗಿದೆ.
ಅಕ್ಟೋಬರ್ 24 ರಂದು, ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಿಂದ ಆರು ಕಿಲೋಮೀಟರ್ ದೂರದಲ್ಲಿ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಸೈನಿಕರು ಮತ್ತು ಇಬ್ಬರು ಆರ್ಮಿ ಪೋರ್ಟರ್‌ಗಳು (ಸರಕು ಸಾಗಣೆ ಮಾಡುವವರು) ಹುತಾತ್ಮರಾಗಿದ್ದರು. ಇನ್ನೊಬ್ಬ ಪೋರ್ಟರ್ ಮತ್ತು ಯೋಧ ಗಾಯಗೊಂಡಿದ್ದರು. ಅಂದು ಬೆಳಗ್ಗೆ ಪುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಉತ್ತರ ಪ್ರದೇಶದ ಕೂಲಿ ಕಾರ್ಮಿಕ ಶುಭಂ ಕುಮಾರ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ ಗಾಯಗೊಳಿಸಿದ್ದರು.
ಅಕ್ಟೋಬರ್ 20 ರಂದು ಗಂದರ್‌ಬಾಲ್‌ನ ಗಗಂಗೀರ್ ಪ್ರದೇಶದಲ್ಲಿ ಸುರಂಗ ನಿರ್ಮಾಣ ಸ್ಥಳದಲ್ಲಿ ಸ್ಥಳೀಯ ವೈದ್ಯ ಮತ್ತು ಬೇರೆ ರಾಜ್ಯದ ಆರು ಕಾರ್ಮಿಕರನ್ನು ಗುಂಡಿಕ್ಕಿ ಕೊಂದಿದ್ದರು. ಅಕ್ಟೋಬರ್ 18 ರಂದು ಶೋಪಿಯಾನ್ ಜಿಲ್ಲೆಯಲ್ಲಿ ಬಿಹಾರದ ಕಾರ್ಮಿಕನೊಬ್ಬನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
Advertisement