ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮುಂಬೈ ದೇವಿ ಕ್ಷೇತ್ರದಿಂದ ಶಿವಸೇನಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶೈನಾ ಎನ್‌ಸಿ ಅವರನ್ನು ಆಮದು ಮಾಡಿಕೊಂಡ ಉತ್ಪನ್ನ ಎಂದು ಕರೆದಿದ್ದ ಶಿವಸೇನೆಯ ಯುಬಿಟಿ ಬಣದ ಅರವಿಂದ್ ಸಾವಂತ್ ಅವರು ಕ್ಷಮೆಯಾಚಿಸಿದ್ದಾರೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ನನಗಿಲ್ಲ ಎಂದು ಸಾವಂತ್ ಹೇಳಿದ್ದಾರೆ. ಶೈನಾ ಎನ್‌ಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಾವಂತ್, ನನ್ನ ಜೀವನದಲ್ಲಿ ಹೆಣ್ಣನ್ನು ಯಾವತ್ತು ಅವಮಾನಿಸಲಿಲ್ಲ. ಆದರೆ ಕಳೆದ ಒಂದು ದಿನದಿಂದ ನನ್ನನ್ನು ಹೆಣ್ಣು ದ್ವೇಷಿಯಂತೆ ಬಿಂಬಿಸಲಾಗುತ್ತಿದೆ. ನನ್ನ ಹೇಳಿಕೆಯನ್ನು ತಿರುಚಿ ಅದಕ್ಕೆ ಬೇರೆ ಅರ್ಥ ಕಲ್ಪಿಸಿ ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದರಿಂದ ನನಗೆ ಬೇಸರವಾಗಿದೆ ಆದರೆ ನನ್ನ ಹೇಳಿಕೆಯು ಯಾರಿಗಾದರೂ ಭಾವನೆಗಳನ್ನು ಘಾಸಿಗೊಳಿಸಿದ್ದರೆ ನನ್ನ ವಿಷಾದವನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಸಂಸದ ಅರವಿಂದ್ ಸಾವಂತ್ ಅವರು ಶೈನಾ ಅವರನ್ನು ಆಮದು ಮಾಡಿದ ಉತ್ಪನ್ನ ಎಂದು ಕರೆದಿದ್ದು ಅವರ ಸ್ಥಿತಿ ಏನಾಗಿದೆ ನೋಡಿ ಎಂದು ಹೇಳಿದ್ದರು. ಜೀವಮಾನವಿಡೀ ಬಿಜೆಪಿಯಲ್ಲೇ ಇದ್ದ ಅವರು ಈಗ ಬೇರೆ ಪಕ್ಷಕ್ಕೆ ಹೋಗುವಂತಾಗಿದೆ. ಆಮದು ಮಾಡಿದ ಸರಕುಗಳು ಇಲ್ಲಿ ಕೆಲಸ ಮಾಡುವುದಿಲ್ಲ, ಮೂಲ 'ಸರಕು' ಮಾತ್ರ ಕೆಲಸ ಮಾಡುತ್ತದೆ. ಈ ಹೇಳಿಕೆಯ ನಂತರ, ಸಾವಂತ್ ಅವರನ್ನು ಗುರಿಯಾಗಿಸಿಕೊಂಡ ಶಿವಸೇನಾ ಶಿಂಧೆ ಬಣ, ಬಿಜೆಪಿಯ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು.
ಅಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಸೆಕ್ಷನ್ 79 ಮತ್ತು 356(2) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಚುನಾವಣಾ ಆಯೋಗ ಮತ್ತು ಮಹಿಳಾ ಆಯೋಗವು ಶಿವಸೇನಾ (ಯುಬಿಟಿ) ನಾಯಕ ಅರವಿಂದ್ ಸಾವಂತ್ ವಿರುದ್ಧ ಕ್ರಮ ತೆಗೆದುಕೊಂಡಿದೆ.
ಇದಕ್ಕೂ ಮೊದಲು, ಶಿವಸೇನಾ ನಾಯಕಿ ಶೈನಾ ಎನ್‌ಸಿ ಅವರು ಶಿವಸೇನಾ (ಯುಬಿಟಿ) ನಾಯಕ ಅರವಿಂದ್ ಸಾವಂತ್ ಅವರ ಆಮದು ಮಾಡಿದ ಸರಕುಗಳ ಕಾಮೆಂಟ್ ಅನ್ನು ಬಲವಾಗಿ ಖಂಡಿಸಿದರು. ಮಹಿಳೆಯರನ್ನು ವಸ್ತುಗಳಂತೆ ಪರಿಗಣಿಸುವುದು, ಅವರ ಘನತೆಗೆ ಧಕ್ಕೆ ತರುವುದು ಸಣ್ಣ ವಿಷಯವಲ್ಲ ಎಂದು ಹೇಳಿದರು. ವಿಷಯವನ್ನು ಚುನಾವಣಾ ಆಯೋಗ ಮತ್ತು ಮಹಿಳಾ ಆಯೋಗವೂ ಗಂಭೀರವಾಗಿ ಪರಿಗಣಿಸಿದೆ ಎಂದು ಶೈನಾ ಹೇಳಿದ್ದಾರೆ. ಇದು ಹೆಣ್ಣಿನ ಗೌರವದ ಹೋರಾಟ... ಹೆಣ್ಣಿನ ಘನತೆಗೆ ಚ್ಯುತಿ ತರುವುದು ಸಣ್ಣ ವಿಷಯವಲ್ಲ. ಆದರೆ ಅವರ ಮನಸ್ಥಿತಿ, ವಿಕೃತ ಮನಸ್ಥಿತಿ ಎಂಬುದು ತಿಳಿಯುತ್ತದೆ ಎಂದು ಹೇಳಿದರು.
Advertisement