ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯ ನೂತನ ಅಧ್ಯಕ್ಷ ಬಿ.ಆರ್ ನಾಯ್ಡು ಅವರು ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲದಲ್ಲಿ ಕೆಲಸ ಮಾಡುವ ಎಲ್ಲರೂ ಹಿಂದೂಗಳಾಗಿರಬೇಕು ಎಂದು ಹೇಳುತ್ತಾರೆ. ಇತರೆ ಧರ್ಮದ ನೌಕರರ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು, ಅವರನ್ನು ಬೇರೆ ಸರ್ಕಾರಿ ಇಲಾಖೆಗಳಿಗೆ ಕಳುಹಿಸಬೇಕೇ ಅಥವಾ VRS (ಸ್ವಯಂ ನಿವೃತ್ತಿ) ನೀಡಬೇಕೇ ಎಂಬ ಬಗ್ಗೆ ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾತನಾಡುವುದಾಗಿ ಟಿಟಿಡಿ ಅಧ್ಯಕ್ಷರು ಹೇಳಿದರು. ಆದರೆ, ಬಿ.ಆರ್ ನಾಯ್ಡು ಅವರ ಈ ಹೇಳಿಕೆಗೆ ರಾಜಕೀಯ ಚರ್ಚೆಗಳು ಶುರುವಾಗಿವೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ವಕ್ಫ್ ಬೋರ್ಡ್ ಬಗ್ಗೆ ಪ್ರಸ್ತಾಪಿಸುವ ಮೂಲಕ ಸರ್ಕಾರವನ್ನು ಗುರಿಯಾಗಿಸಿದ್ದಾರೆ.
ಬಿ.ಆರ್. ನಾಯ್ಡು ಅವರು ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿರುಮಲದಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ. ದೇವಸ್ಥಾನದ ಪಾವಿತ್ರ್ಯತೆ ಕಾಪಾಡಬೇಕು ಎಂದರು. ತಿರುಪತಿ ದೇಗುಲದಲ್ಲಿ ಲಡ್ಡು ಪ್ರಸಾದದ ವಿಚಾರದಲ್ಲಿ ಗದ್ದಲ ಎದ್ದಿತ್ತು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಹಿಂದಿನ ಜಗನ್ ಮೋಹನ್ ಅವರ ಸರ್ಕಾರದ ಅವಧಿಯಲ್ಲಿ ತಿರುಪತಿ ಬಾಲಾಜಿ ಅವರ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗುತ್ತಿತ್ತು ಎಂದು ಹೇಳಿದ್ದರು.
ಪ್ರಯೋಗಾಲಯದ ಪರೀಕ್ಷಾ ವರದಿಯನ್ನು ಉಲ್ಲೇಖಿಸಿ, ಅದರಲ್ಲಿ ಹಸು ಮತ್ತು ಹಂದಿ ಕೊಬ್ಬನ್ನು ಬಳಸಲಾಗಿದೆ ಎಂದು ಹೇಳಿದ್ದರು. ತಮ್ಮ ಆರೋಪದ ನಂತರ ಜಗನ್ ಮೋಹನ್ ರೆಡ್ಡಿ ಅವರು ಲಡ್ಡು ತಯಾರಿಕೆಯಲ್ಲಿ ಶುದ್ಧ ತುಪ್ಪವನ್ನು ಮಾತ್ರ ಬಳಸುತ್ತಾರೆ ಎಂದು ಸ್ಪಷ್ಟಪಡಿಸಿದ್ದರು. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಧರ್ಮ ಮತ್ತು ರಾಜಕೀಯ ಬೆರೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿತ್ತು. ತನಿಖೆ ನಡೆಯುತ್ತಿರುವಾಗ ಮಾಧ್ಯಮಗಳಿಗೆ ಹೋಗುವ ಅಗತ್ಯ ಏನಿತ್ತು ಎಂದು ನ್ಯಾಯಾಲಯ ಹೇಳಿತ್ತು.
ಈ ವಿಚಾರದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರೀಯ ವಕ್ಫ್ ಕೌನ್ಸಿಲ್‌ಗೆ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಕಡ್ಡಾಯವಾಗಿ ಸೇರಿಸಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಮುಸ್ಲಿಮರು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಟ್ರಸ್ಟಿಗಳಾಗಲು ಸಾಧ್ಯವಾಗದಿದ್ದರೆ, ಮುಸ್ಲಿಮೇತರರು ವಕ್ಫ್ ಮಂಡಳಿಯಲ್ಲಿ ಹೇಗೆ ಇರುತ್ತಾರೆ ಎಂದು ಓವೈಸಿ ಪ್ರಶ್ನಿಸಿದ್ದಾರೆ. ಹೊಸದಾಗಿ ನೇಮಕಗೊಂಡಿರುವ ಟಿಟಿಡಿ ಅಧ್ಯಕ್ಷರು ತಿರುಮಲದಲ್ಲಿ ಹಿಂದೂ ನೌಕರರಿಗೆ ಮಾತ್ರ ಕೆಲಸ ಮಾಡಲು ಅವಕಾಶ ನೀಡುವ ನೀತಿಯನ್ನು ಪ್ರಕಟಿಸಿದ್ದಾರೆ ಎಂದು ಅವರು ಹೇಳಿದರು. ಕೇಂದ್ರದ ಎನ್ ಡಿಎ ಸರ್ಕಾರ ಮುಸ್ಲಿಮೇತರರನ್ನು ವಕ್ಫ್ ಮಂಡಳಿಗೆ ಸೇರಿಸಲು ಬಯಸಿದೆ ಎಂದು ಆರೋಪಿಸಿದರು.
Advertisement