ನವದೆಹಲಿ: ಕಾರೊಂದನ್ನು ನಿಲ್ಲಿಸಲು ಯತ್ನಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕಾರಿನ ಬಾನೆಟ್ ಮೇಲೆ 20 ಮೀಟರ್‌ಗೂ ಹೆಚ್ಚು ದೂರ ಅಪ್ರಾಪ್ತರು ಎಳೆದೊಯ್ದಿರುವ ಘಟನೆ ನೈಋತ್ಯ ದೆಹಲಿಯ ಬೆರ್ ಸರೈ ಪ್ರದೇಶದಲ್ಲಿ ನಡೆದಿದೆ.
ಶನಿವಾರ ಸಂಜೆ 7.45ರ ಸುಮಾರಿಗೆ ವೇದಾಂತ್ ದೇಶಿಕಾ ಮಾರ್ಗ್ ಬಳಿಯ ಬೆರ್ ಸರೈ ಸಂಚಾರಿ ಸಿಗ್ನಲ್ ಬಳಿ ಈ ಘಟನೆ ನಡೆದಿದೆ. ವಾಹನದಲ್ಲಿದ್ದ ಇಬ್ಬರೂ ಅಪ್ರಾಪ್ತರು ಎಂದು ಗುರುತಿಸಲಾಗಿದೆ.
ಚಾಲಕ ಕಾರನ್ನು ಮುಂದಕ್ಕೆ ಮತ್ತು ಹಿಂದಕ್ಕೆ ಸರಿಸಿದಾಗ ಇಬ್ಬರು ಪೊಲೀಸರು ಬಾನೆಟ್ ಮೇಲೆ ಬಿದ್ದಿರುವುದನ್ನು ಅಲ್ಲಿಯೇ ಇದ್ದ ಸ್ಥಳೀಯರು ಸೆರೆಹಿಡಿರುವ ವೀಡಿಯೊದಲ್ಲಿ ಸೆರೆಯಾಗಿದೆ. ಸ್ವಲ್ಪ ಸಮಯದ ನಂತರ ಕಾರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಒಬ್ಬ ಅಧಿಕಾರಿ ಕೆಳಗೆ ಬಿದ್ದಿದ್ದಾರೆ.
ಕರ್ತವ್ಯದಲ್ಲಿದ್ದ ಅಧಿಕಾರಿಗೆ ಡಿಕ್ಕಿ ಹೊಡೆದ ಕಾರೊಂದು ಸ್ಥಳದಿಂದ ಪರಾರಿಯಾಗಿದೆ ಎಂದು ಕಿಶನ್ ಗರ್ ಠಾಣೆಯಿಂದ ಕರೆ ಸ್ವೀಕರಿಸಿದ ನಂತರ ತಂಡವೊಂದನ್ನು ಅಲ್ಲಿಗೆ ಕಳುಹಿಸಲಾಯಿತು. ಗಾಯಗೊಂಡ ಅಧಿಕಾರಿಗಳನ್ನು ಈಗಾಗಲೇ ಪಿಸಿಆರ್ ವ್ಯಾನ್ ಮೂಲಕ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ, ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಪ್ರಮೋದ್ ಮತ್ತು ಹೆಡ್ ಕಾನ್ಸ್‌ಟೇಬಲ್ ಸೈಲೇಶ್ ಚೌಹಾಣ್ ಅವರ ಆರೋಗ್ಯ ಸ್ಥಿರವಾಗಿತ್ತು ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ-ಪಶ್ಚಿಮ) ಸುರೇಂದ್ರ ಚೌಧರಿ ತಿಳಿಸಿದ್ದಾರೆ.
ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ರೆಡ್ ಲೈಟ್ ಇದ್ದರೂ ನಿಲ್ಲಿಸದೆ ಸಂಚರಿಸಿದ ಕಾರೊಂದನ್ನು ನಿಲ್ಲಿಸಲು ಹೆಡ್ ಕಾನ್ಸ್ ಟೇಬಲ್ ಪ್ರಯತ್ನಿಸಿದರು ಆದರೂ, ಚಾಲಕ ಅಲ್ಲಿಂದ ವೇಗ ಹೆಚ್ಚಿಸಿ ಪರಾರಿಯಾಗಲು ಯತ್ನಿಸಿದಾಗ ಇಬ್ಬರು ಅಧಿಕಾರಿಗಳನ್ನು ಸುಮಾರು 20 ಮೀಟರ್ ದೂರದವರೆಗೂ ಕಾರಿನ ಬಾನೆಟ್ ಮೇಲೆ ಎಳೆದೊಯ್ಯಲಾಯಿತು ಎಂದು ಗಾಯಗೊಂಡ ಅಧಿಕಾರಿಗಳು ತಿಳಿಸಿದ್ದಾರೆ.
ಎಎಸ್‌ಐ ಪ್ರಮೋದ್ ಮತ್ತು ಹೆಡ್ ಕಾನ್ಸ್‌ಟೇಬಲ್ ಸೈಲೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಈ ಸಂಬಂಧ ಕೊಲೆ ಯತ್ನ, ಅಧಿಕೃತ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮತ್ತು ಸಾರ್ವಜನಿಕ ಜೀವಕ್ಕೆ ಅಪಾಯವನ್ನುಂಟು ಮಾಡಿದ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
Advertisement