ಚೆನ್ನೈ: ಬಿಜೆಪಿ ತನ್ನ ಸೈದ್ಧಾಂತಿಕ ವಿರೋಧಿ ಹಾಗೂ ಡಿಎಂಕೆ ರಾಜಕೀಯ ಎದುರಾಳಿ ಎಂದು ಪರೋಕ್ಷವಾಗಿ ಹೇಳಿದ ಒಂದು ವಾರದ ನಂತರ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರ ಕಳಂಗ (ಟಿವಿಕೆ) ಪಕ್ಷ ಭಾನುವಾರ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
ದಳಪತಿ ವಿಜಯ್ ನೇತೃತ್ವದಲ್ಲಿ ಭಾನುವಾರ ನಡೆದ ಜಿಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಮೊದಲ ಸಭೆಯಲ್ಲಿ ಪಕ್ಷ 26 ನಿರ್ಣಯಗಳನ್ನು ಅಂಗೀಕರಿಸಿದೆ. ರಾಜ್ಯದಲ್ಲಿ ಕೊಲೆ, ದರೋಡೆ ಮತ್ತಿತರ ಘಟನೆಗಳು ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆಡಳಿತರೂಢ ಡಿಎಂಕೆ ಪಕ್ಷ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.
'ಒಂದು ರಾಷ್ಟ್ರ, ಒಂದು ಚುನಾವಣೆ' ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಇದು ಪ್ರಜಾಪ್ರಭುತ್ವದ ತತ್ವಗಳಿಗೆ ಬೆದರಿಕೆ ಹಾಕುತ್ತದೆ. ಹಾಗೆಯೇ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಹಿಂಪಡೆಯಬೇಕೆಂದು ಟಿವಿಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತಪಡಿಸಿರುವ ಟಿವಿಕೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ರದ್ದುಗೊಳಿಸುವ ಬೇಡಿಕೆಯನ್ನು ಬೆಂಬಲಿಸಿದೆ. ಶಿಕ್ಷಣವನ್ನು ಸಂವಿಧಾನದ ಸಮವರ್ತಿ ಪಟ್ಟಿಯಿಂದ ರಾಜ್ಯಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದೆ. ಶ್ರೀಲಂಕಾದ ವಿದೇಶಾಂಗ ನೀತಿಯ ಬಗ್ಗೆ ರಾಜ್ಯದೊಂದಿಗೆ ಸಮಾಲೋಚಿಸಬೇಕು. ಶ್ರೀಲಂಕಾಕ್ಕೆ ಭಾರತದ ರಾಯಭಾರಿಯಾಗಿ ತಮಿಳರನ್ನು ನೇಮಿಸಬೇಕೆಂದು ಒತ್ತಾಯಿಸಿದೆ.
Advertisement