ಮಥುರಾ: ನಮ್ಮಲ್ಲಿ ಜನ ಮರುಳೋ, ಜಾತ್ರೆ ಮರುಳೋ ಎಂಬ ಮಾತಿದೆ. ಇಂಥಹ ಘಟನೆಗಳನ್ನು ನೋಡಿಯೇ ಈ ಮಾತನ್ನು ಹೇಳಿರಬಹುದು.
ಆಗಿದ್ದಿಷ್ಟು... ಮಥುರಾ ವೃಂದಾವನದ ಬಂಕೆ ಬಿಹಾರಿ ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರು ಎಸಿ ನೀರನ್ನು ಪವಿತ್ರ ಜಲವೆಂದು ಭಾವಿಸಿ ಕುಡಿದಿದ್ದಾರೆ. ಈಗ ಅದರ ವಿಡಿಯೋ ವ್ಯಾಪಕವಾಗಿ ವೈರಲ್ ಆಗತೊಡಗಿದೆ. ಈ ವಿಡಿಯೊವನ್ನು ಕಂಡ ನೆಟ್ಟಿಗರು ಜನರಿಗೆ ಶಿಕ್ಷಣದ ಅವಶ್ಯಕತೆ ತುಂಬಾನೇ ಇದೆʼ ಎಂದು ಹೇಳಿದ್ದಾರೆ.
ಈ ನೀರು ಚರಣಾಮೃತ (ವಿಗ್ರಹದ ಅಭಿಷೇಕದಿಂದ ಬಂದ ನೀರು) ಅಲ್ಲ, ಇದು ಗರ್ಭಗೃಹದಲ್ಲಿ ಅಳವಡಿಸಲಾಗಿರುವ AC ಯಿಂದ ಹೊರಬಿಡಲಾಗುತ್ತಿರುವ ನೀರು ಇದನ್ನು ಯಾರೂ ಸೇವಿಸಬೇಡಿ ಎಂದು ಸ್ವತಃ ದೇವಾಲಯದ ಸಿಬ್ಬಂದಿಯೇ ಮನವಿ ಮಾಡುತ್ತಿದ್ದರೂ ಅದನ್ನು ಕೇಳದೇ ಜನರು AC ನೀರನ್ನು ಪವಿತ್ರ ಜಲವೆಂದು ಭಾವಿಸಿ ತೀರ್ಥದ ರೂಪದಲ್ಲಿ ಕುಡಿದ್ದಾರೆ.
ಇನ್ನೂ ಕೆಲವರು ತಾವು ಕುಡಿಯುವುದಷ್ಟೇ ಅಲ್ಲದೇ ಮನೆಗೆ ಕೊಂಡೊಯ್ಯುವುದಕ್ಕೂ ಹಿಡಿದಿಟ್ಟುಕೊಂಡಿದ್ದಾರೆ. ಇದು ಚರಣಾಮೃತವಲ್ಲ, ಚರಣಾಮೃತ ಬೇಕಾದಲ್ಲಿ ದೇವಾಲಯದ ಒಳಗೆ ನೀಡುತ್ತಾರೆ, ಕೇಳಿ ಅದನ್ನು ಪಡೆಯಿರಿ ಎಂದು ಹಲವು ಬಾರಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದರೂ ಭಕ್ತಾದಿಗಳು ಅದಕ್ಕೆ ಕಿವಿಗೊಡದೇ AC ನೀರನ್ನು ಕುಡಿಯುತ್ತಿರುವುದನ್ನು ನೋಡಿ ಬೇಸತ್ತ ಸಿಬ್ಬಂದಿ ಸ್ವತಃ ಈ ದೃಶ್ಯವನ್ನು ಸೆರೆಹಿಡಿದಿದ್ದು, ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಆನೆಯ ರಚನೆಯಿಂದ ತೊಟ್ಟಿಕ್ಕುವ ನೀರು "ಚರಣ್ ಅಮೃತ" ಎಂದು ಜನರು ವದಂತಿಗಳನ್ನು ಹಬ್ಬಿಸಿದ್ದಾರೆ ಎಂದು ದೇವಸ್ಥಾನದ ಉಸ್ತುವಾರಿ ಆಶಿಶ್ ಗೋಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ತಪ್ಪು ಕಲ್ಪನೆಯನ್ನು ಜನರು ತಮ್ಮ ಮನಸ್ಸಿನಿಂದ ಹೋಗಲಾಡಿಸಬೇಕು. ಗರ್ಭಗುಡಿಯಲ್ಲಿ ಅಳವಡಿಸಿರುವ ಎಸಿಯಿಂದ ನೀರು ಜಿನುಗುತ್ತದೆ, ಇದು ‘ಚರಣ ಅಮೃತ’ ಅಲ್ಲವೇ ಅಲ್ಲ, ಇದನ್ನು ಜನರು ಅರಿಯಬೇಕು" ಎಂದು ಗೋಸ್ವಾಮಿ ಹೇಳಿದ್ದಾರೆ.
Advertisement