ಶ್ರೀನಗರ: 6 ವರ್ಷಗಳಲ್ಲಿ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಆರ್ಟಿಕಲ್ 370 ರದ್ದತಿ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ.
ಪಿಡಿಪಿ ಶಾಸಕ ವಾಹಿದ್ ಪಾರಾ ಸೋಮವಾರ (ನ.04 ರಂದು) ಆರ್ಟಿಕಲ್ 370 ರದ್ದತಿ ವಿರುದ್ಧ ನಿರ್ಣಯ ಮಂಡಿಸಿದ್ದು, ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ಇದ್ದ ರಾಜ್ಯದ ಸ್ಥಾನಮಾನಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಆರ್ಟಿಕಲ್ 370 ರದ್ದತಿ ವಿರುದ್ಧದ ನಿರ್ಣಯ ಕೈಗೊಂಡಿದ್ದರ ವಿರುದ್ಧ ವಿಪಕ್ಷ ಬಿಜೆಪಿ ಸದನದಲ್ಲಿ ಪ್ರತಿಭಟನೆ ನಡೆಸಿದೆ. ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನ ಹಿರಿಯ ನಾಯಕ, ಏಳು ಬಾರಿ ಶಾಸಕರಾಗಿರುವ ಅಬ್ದುಲ್ ರಹೀಮ್ ರಾಥರ್ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಶಾಸಕಾಂಗ ಸಭೆಯ ಮೊದಲ ಸ್ಪೀಕರ್ ಆಗಿ ಆಯ್ಕೆಯಾದ ತಕ್ಷಣ ಪುಲ್ವಾಮಾ ಶಾಸಕರು ಆರ್ಟಿಕಲ್ 370 ವಿರುದ್ಧದ ನಿರ್ಣಯ ಮಂಡಿಸಿದರು.
ಈ ನಿರ್ಣಯವನ್ನು ವಿರೋಧಿಸಿ ಬಿಜೆಪಿಯ ಎಲ್ಲಾ 28 ಮಂದಿ ಶಾಸಕರು ಪ್ರತಿಭಟನೆ ನಡೆಸಿದರು. ವಿಧಾನಸಭೆ ನಿಯಮಗಳನ್ನು ಉಲ್ಲಂಘಿಸಿ ನಿರ್ಣಯ ತಂದಿರುವ ಪಾರಾ ಅವರನ್ನು ಅಮಾನತುಗೊಳಿಸುವಂತೆ ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ ಒತ್ತಾಯಿಸಿದರು. ಸ್ಪೀಕರ್ ಪ್ರತಿಭಟನಾನಿರತ ಸದಸ್ಯರಿಗೆ ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಪದೇ ಪದೇ ಮನವಿ ಮಾಡಿದರೂ ವ್ಯರ್ಥವಾಯಿತು. ಠರಾವು ಇನ್ನೂ ತನಗೆ ಬಂದಿಲ್ಲ, ಅದು ಬಂದಾಗ ಪರಿಶೀಲಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಸದಸ್ಯರು ಮಣಿಯಲು ನಿರಾಕರಿಸಿದ್ದರಿಂದ, ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಎನ್‌ಸಿ ಶಾಸಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಗದ್ದಲದ ನಡುವೆ ಎನ್‌ಸಿ ಶಾಸಕ ಶಬೀರ್ ಕುಲ್ಲಯ್ ಬಾವಿಗೆ ನುಗ್ಗಿದರು. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ಕೇಂದ್ರವು ಆಗಸ್ಟ್ 5, 2019 ರಂದು ರದ್ದುಗೊಳಿಸಿತ್ತು.
Advertisement