ನವದೆಹಲಿ: ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಖಂಡಿಸಿದ್ದಾರೆ, ಇದನ್ನು ಉದ್ದೇಶಪೂರ್ವಕ ಕೃತ್ಯ ಎಂದು ಕರೆದಿದ್ದು, ಭಾರತೀಯ ರಾಯಭಾರಿಗಳನ್ನು ಬೆದರಿಸುವ ಪ್ರಯತ್ನ ಎಂದು ಟೀಕಿಸಿದ್ದಾರೆ.
ದಾಳಿ ಘಟನೆ ಬೆನ್ನಲ್ಲೇ, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲಿನ ಉದ್ದೇಶಪೂರ್ವಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ನಮ್ಮ ರಾಯಭಾರಿಗಳನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಅಷ್ಟೇ ಭಯಾನಕವಾಗಿದೆ. ಇಂತಹ ಹಿಂಸಾಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾದ ಸರ್ಕಾರ ನ್ಯಾಯವನ್ನು ಖಾತ್ರಿಪಡಿಸಿ, ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ ಎಂಬ ನಿರೀಕ್ಷೆಯಿದೆ ಎಂದಿದ್ದಾರೆ.
ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಮಹಾಸಭಾ ದೇವಾಲಯದಲ್ಲಿ ಖಲಿಸ್ತಾನಿ ಬೆಂಬಲಿಗರು ಭಕ್ತಾದಿಗಳ ಮೇಲೆ ಹಲ್ಲೆ ನಡೆಸುವ ಮತ್ತು ದೇವಾಲಯದ ಆವರಣಕ್ಕೆ ನುಗ್ಗಿರುವ ವಿಡಿಯೋ ವೈರಲ್ ಆದ ನಂತರ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಕೆನಡಾದಲ್ಲಿ ಖಾಲಿಸ್ತಾನಿ ಪರ ಬೆಂಬಲಿಗರಿಂದ ಭಾರತೀಯರ ವಿರುದ್ಧ ನಡೆಸುತ್ತಿರುವ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಅವರ ಮೊದಲ ಅಧಿಕೃತ ಹೇಳಿಕೆ ಇದಾಗಿದೆ.
ಇದಕ್ಕೂ ಮುನ್ನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಾ ಖಲಿಸ್ತಾನಿಗಳು ನಡೆಸಿದ ದಾಳಿ ಘಟನೆಯನ್ವು ಖಂಡಿಸಿತ್ತು. ಕೆನಡಾದಲ್ಲಿರುವ ತನ್ನ ನಾಗರಿಕರ ಸುರಕ್ಷತೆಯ ಬಗ್ಗೆ ಭಾರತ ಸರ್ಕಾರ ಅಪಾರವಾದ ಕಾಳಜಿ ಹೊಂದಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಹಿಂದೂ ದೇವಾಲಯ ಮೇಲಿನ ದಾಳಿ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತು ವಿಪಕ್ಷ ನಾಯಕ ಪಿಯರೆ ಪೊಯ್ಲಿವ್ರೆ ಘಟನೆ ವಿರುದ್ದ ಮಾತನಾಡಿದ್ದಾರೆ. ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರದ ಕೃತ್ಯಗಳು ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬ ಕೆನಡಾದವರು ತಮ್ಮ ನಂಬಿಕೆಯನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಟ್ರೂಡೊ ತಿಳಿಸಿದ್ದಾರೆ.
ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಕೂಡ ದಾಳಿಯನ್ನು ಖಂಡಿಸಿದ್ದು, ಎಲ್ಲಾ ಪೂಜಾ ಸ್ಥಳಗಳ ಸುರಕ್ಷತೆ ಖಾತ್ರಿಗೆ ಕೆನಡಾ ಸರ್ಕಾರವನ್ನು ಒತ್ತಾಯಿಸಿದೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿರಬಹುದು ಎಂದು ಪ್ರಧಾನಿ ಟ್ರುಡೊ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಆರೋಪಿಸಿದಾಗಿನಿಂದಲೂ ಭಾರತ ಮತ್ತು ಕೆನಡಾ ನಡುವಿನ ಸಂಬಂಧವು ಗಮನಾರ್ಹವಾಗಿ ಹದಗೆಟ್ಟಿದೆ. ಇದನ್ನು ಭಾರತ ಸಂಪೂರ್ಣವಾಗಿ ನಿರಾಕರಿಸಿದೆ.
Advertisement