ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಯಲ್ಲಿ ಇಂದು ನಾಟಕೀಯ ವಿದ್ಯಮಾನ ನಡೆದಿದ್ದು, ಆಡಳಿತ ಮತ್ತು ವಿಪಕ್ಷ ನಾಯಕರ ಗದ್ದಲ ಭಾರೀ ಸದ್ದು ಮಾಡಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸುವುದರ ವಿರುದ್ಧ ಪ್ರತಿಭಟನೆಯ ವೇಳೆ ಬಾವಿಗೆ ನುಗ್ಗಿದ ಪ್ರತಿಪಕ್ಷ ಸದಸ್ಯರನ್ನು ಹೊರಹಾಕಲು ಸ್ಪೀಕರ್ ಸೂಚಿಸಿದ ನಂತರ ಬಿಜೆಪಿ ಶಾಸಕರು ಮತ್ತು ಮಾರ್ಷಲ್‌ಗಳ ನಡುವೆ ವಾಗ್ವಾದ ನಡೆಯಿತು.
ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರ ನಿರ್ದೇಶನದ ಮೇರೆಗೆ ಮೂವರು ಬಿಜೆಪಿ ಶಾಸಕರನ್ನು ಪ್ರತ್ಯೇಕಗೊಳಿಸಿದರು.
ನಡೆದ ಘಟನೆಯೇನು?: ಇಂದು ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ನಿನ್ನೆ ಅಂಗೀಕರಿಸಿದ ನಿರ್ಣಯದ ವಿರುದ್ಧ ಪ್ರತಿಭಟಿಸಿದ್ದರಿಂದ ಗದ್ದಲ ಉಂಟಾಯಿತು. ಬಿಜೆಪಿ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ಅವರು ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ, ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಮತ್ತು ಶಾಸಕ ಲಂಗೇಟ್ ಶೇಖ್ ಖುರ್ಷೀದ್ ಅವರು ಆರ್ಟಿಕಲ್ 370 ಮತ್ತು 35 ಎ ನ್ನು ಮರುಸ್ಥಾಪಿಸುವಂತೆ ಬ್ಯಾನರ್ ಪ್ರದರ್ಶಿಸಿ ಸದನದ ಬಾವಿಗಿಳಿದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಕೂಡ ಸದನದ ಬಾವಿಗೆ ಹಾರಿ ಬ್ಯಾನರ್ ಕಿತ್ತು ಹಾಕಿದರು. ಗದ್ದಲ ನಡುವೆಯೇ ಸ್ಪೀಕರ್ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು. ಆದರೆ, ಸದನ ಮುಂದೂಡಿದ ಬಳಿಕವೂ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದರು.
ಮತ್ತೆ ಕಲಾಪ ಆರಂಭವಾದಾಗ, ಸ್ಪೀಕರ್ ಅವರು ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಲು ವಿರೋಧ ಪಕ್ಷದ ಸದಸ್ಯರನ್ನು ವಿನಂತಿಸಿದರೂ ಸಹ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಮುಂದುವರೆಸಿದರು.ಆಗ ಸ್ಪೀಕರ್, ‘ನೀವು ನಿಯಮಗಳನ್ನು ಮೀರುತ್ತಿದ್ದೀರಿ, ಕೆಲ ಸದಸ್ಯರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ, ನಿಮ್ಮ ವರ್ತನೆ ಬೇಸರ ತರಿಸುತ್ತಿದೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಾಳೆಗೆ ಕಲಾಪ ಮುಂದೂಡಿದರು.
ಆಗ ಬಿಜೆಪಿ ಸದಸ್ಯ ಸುನಿಲ್ ಶರ್ಮ ನ್ಯಾಷನಲ್ ಕಾನ್ಫರೆನ್ಸ್ ನಾಯಕರ ವಿಶೇಷ ಸ್ಥಾನಮಾನದ ನಾಟಕವು ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದ್ದು, ಇದು ಆಡಳಿತ ಪಕ್ಷ ಸದಸ್ಯರನ್ನು ಕೆರಳಿಸಿತು.
ನಿನ್ನೆ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ಆರ್ಟಿಕಲ್ 370 ಮರುಸ್ಥಾಪನೆಯ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿದ ನಂತರ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು. ಬಿಜೆಪಿ ಸದಸ್ಯರು "ಬಲಿದಾನ್ ಹುವೇ ಜಹಾನ್ ಮುಖರ್ಜಿ ವೋ ಕಾಶ್ಮೀರ ಹಮಾರಾ ಹೈ" ಎಂದು ಘೋಷಣೆಗಳನ್ನು ಕೂಗಿದರು, ಆಗ ನ್ಯಾಷನಲ್ ಕಾನ್ಫರೆನ್ಸ್ ಶಾಸಕರು "ಜಿಸ್ ಕಾಶ್ಮೀರ್ ಕೋ ಖೂನ್ ಸೇ ಸೀಂಚಾ, ವೋ ಕಾಶ್ಮೀರ್ ಹಮಾರಾ ಹೈ" ಎಂದು ಹೇಳಿದರು.
ಗದ್ದಲ ಮುಂದುವರಿದಾಗ ಸ್ಪೀಕರ್ ಅವರು ಏನನ್ನೂ ದಾಖಲಿಸಬಾರದು ಅಥವಾ ವರದಿ ಮಾಡಬಾರದು ಎಂದು ನಿರ್ದೇಶನ ನೀಡಿದರು. ನಂತರ ಸ್ಪೀಕರ್ ಅವರು ಬಾವಿಗೆ ನುಗ್ಗಿದ ಬಿಜೆಪಿ ಸದಸ್ಯರನ್ನು ಮಾರ್ಷಲ್ ಮಾಡುವಂತೆ ಸೂಚಿಸಿದರು, ಇದು ವಿಧಾನಸಭೆ ಮಾರ್ಷಲ್‌ಗಳು ಮತ್ತು ಬಿಜೆಪಿ ಶಾಸಕರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಬಿಜೆಪಿಯ ಏಕೈಕ ಮಹಿಳಾ ಶಾಸಕಿ ಶಗುನ್ ಪರಿಹಾರ್ ಅವರನ್ನು ಎದುರಿಸಲು ಮಹಿಳಾ ಮಾರ್ಷಲ್‌ಗಳನ್ನು ಕರೆಸಲಾಯಿತು. ಆಡಳಿತ ನಾಯಕರ ಛೇಂಬರ್ ನಲ್ಲಿ ಬಡಿದಾಟದ ನಡುವೆ ಬಿಜೆಪಿಯ ಮೂವರು ಶಾಸಕರನ್ನು ಸದನದಿಂದ ಹೊರ ಹಾಕಲಾಯಿತು.
ಎನ್‌ಸಿ ಸದಸ್ಯರು "ಜಮ್ಮು ಕಾಶ್ಮೀರ ಕಿ ಆವಾಜ್ ಕ್ಯಾ, ಆರ್ಟಿಕಲ್ 370 ಔರ್ ಕ್ಯಾ" ಎಂಬ ಘೋಷಣೆಗಳನ್ನು ಎತ್ತಿದರೆ, ಬಿಜೆಪಿ ಶಾಸಕರು "ಭಾರತ್ ಮಾತಾ ಕಿ ಜೈ" ಎಂದು ಕೂಗಿದರು. ಸಚಿವ ಸತೀಶ್ ಶರ್ಮಾ ಎದ್ದುನಿಂತು, ಬಿಜೆಪಿ ಒಡೆದು ಆಳುವ ನಾಟಕವಾಡುತ್ತಿದೆ ಎಂದಾಗ ಬಿಜೆಪಿ ಸದಸ್ಯರು ಭಾರತ ಮಾತೆ ಎಲ್ಲರಿಗೂ ಸೇರಿದ್ದು ಎಂದರು.
Advertisement