ಶಿಮ್ಲಾ: ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ನೀಡಬೇಕಿದ ಸಮೋಸಾವನ್ನು ಅವರ ಸಿಬ್ಬಂದಿಗೆ ನೀಡಿರುವುದು ಹಾಗೂ ಅದಕ್ಕೆ ಸಂಬಂಧಿಸಿದ ಸಿಐಡಿ ತನಿಖೆ ಈಗ ಭರ್ಜರಿ ಸುದ್ದಿಯಲ್ಲಿದೆ.
ಸಿಎಂಗಾಗಿ ತರಿಸಿದ್ದ ಸಮೋಸಾವನ್ನು ಅವರ ಸಿಬ್ಬಂದಿಗೆ ನೀಡಿರುವುದರ ಕುರಿತು ತನಿಖೆ ನಡೆದಿದ್ದು, ಈ ಘಟನೆಯನ್ನು ಸಿಐಡಿ ಸರ್ಕಾರಿ ವಿರೋಧಿ ಕೃತ್ಯ ಎಂದು ಹೇಳಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ.
ಅಕ್ಟೋಬರ್ 21 ರಂದು ಸಿಐಡಿ ಕೇಂದ್ರ ಕಚೇರಿಗೆ ಕಾರ್ಯಕ್ರಮಕ್ಕಾಗಿ ತೆರಳಿದ್ದ ಮುಖ್ಯಮಂತ್ರಿಗೆ ನೀಡಲು ಲಕ್ಕರ್ ಬಜಾರ್‌ನ ಹೋಟೆಲ್ ರಾಡಿಸನ್ ಬ್ಲೂನಿಂದ ಮೂರು ಬಾಕ್ಸ್‌ಗಳಲ್ಲಿ ಸಮೋಸಾ ಮತ್ತು ಕೇಕ್‌ಗಳನ್ನು ತರಿಸಲಾಗಿತ್ತು. ಆದರೆ ಸಮನ್ವಯದ ಕೊರತೆಯಿಂದಾಗಿ ಸಿಎಂ ಗೆ ನೀಡುವ ಬದಲು ಅವುಗಳನ್ನು ಸಿಎಂ ಭದ್ರತಾ ಸಿಬ್ಬಂದಿಗೆ ನೀಡಲಾಗಿದ್ದು ಉಪ ಎಸ್ಪಿ ಶ್ರೇಣಿಯ ಅಧಿಕಾರಿ ನಡೆಸಿದ ವಿಚಾರಣೆಯ ವರದಿಯಲ್ಲಿ ಬಹಿರಂಗವಾಗಿದೆ.
ಐಜಿ ಶ್ರೇಣಿಯ ಅಧಿಕಾರಿಯೊಬ್ಬರು ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಹೋಟೆಲ್‌ನಿಂದ ಕೆಲವು ತಿನಿಸುಗಳನ್ನು ತರುವಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ)ಗೆ ಕೇಳಿದ್ದರು ಎಂದು ವರದಿ ಹೇಳಿದೆ.
ಎಸ್‌ಐ ಸಹಾಯಕ ಎಸ್‌ಐ (ಎಎಸ್‌ಐ) ಮತ್ತು ಹೆಡ್ ಕಾನ್‌ಸ್ಟೆಬಲ್‌ಗೆ ಉಪಾಹಾರ ತರುವಂತೆ ಸೂಚಿಸಿದ್ದರು. ಎಎಸ್‌ಐ ಮತ್ತು ಹೆಡ್ ಕಾನ್‌ಸ್ಟೆಬಲ್ ಹೋಟೆಲ್‌ನಿಂದ ಮೂರು ಸೀಲ್ಡ್ ಬಾಕ್ಸ್‌ಗಳಲ್ಲಿ ತಿಂಡಿಗಳನ್ನು ತಂದು ಎಸ್‌ಐಗೆ ಮಾಹಿತಿ ನೀಡಿದರು. ಮೂರು ಬಾಕ್ಸ್‌ಗಳಲ್ಲಿನ ತಿಂಡಿಗಳನ್ನು ಮುಖ್ಯಮಂತ್ರಿಗಳಿಗೆ ನೀಡಬೇಕೇ ಎಂದು ಕರ್ತವ್ಯದಲ್ಲಿದ್ದ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಯನ್ನು ಕೇಳಿದಾಗ, ಅವುಗಳನ್ನು ಮೆನುವಿನಲ್ಲಿ ಸೇರಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುತೂಹಲಕಾರಿಯಾಗಿ, ಸಿಐಡಿ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ತಮ್ಮ ಟಿಪ್ಪಣಿಯಲ್ಲಿ ವಿಚಾರಣಾ ವರದಿಯಲ್ಲಿ ಹೆಸರಿಸಲಾದ ಎಲ್ಲಾ ವ್ಯಕ್ತಿಗಳು ಸಿಐಡಿ ಮತ್ತು ಸರ್ಕಾರದ ವಿರುದ್ಧವಾಗಿ ವರ್ತಿಸಿದ್ದಾರೆ, ಇದರಿಂದಾಗಿ ವಿವಿಐಪಿಗಳಿಗೆ ವಸ್ತುಗಳನ್ನು ನೀಡಲಾಗಿಲ್ಲ ಎಂದು ಬರೆದಿದ್ದಾರೆ. ಅವರು ತಮ್ಮದೇ ಆದ ಅಜೆಂಡಾ ಪ್ರಕಾರ ಕಾರ್ಯನಿರ್ವಹಿಸಿದ್ದಾರೆ ಎಂದು ಟಿಪ್ಪಣಿಯಲ್ಲಿ ಸೇರಿಸಲಾಗಿದೆ.
Advertisement