ನವದೆಹಲಿ: ಸುಪ್ರೀಂ ಕೋರ್ಟ್ ಗುರುವಾರ ತನ್ನ ವಿಶೇಷ ಸಾಂವಿಧಾನಿಕ ಅಧಿಕಾರವನ್ನು ಬಳಸಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್‌ನ ಆಸ್ತಿಯನ್ನು ಹರಾಜು ಹಾಕಲು ಆದೇಶ ನೀಡಿದೆ.
ಜೆಟ್ ಏರ್‌ವೇಸ್‌ನ ನಿರ್ಣಯ ಯೋಜನೆಯನ್ನು ಎತ್ತಿಹಿಡಿಯುವ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ತೀರ್ಪನ್ನು ಮತ್ತು ವಿಮಾನಯಾನ ಸಂಸ್ಥೆಯ ಮಾಲೀಕತ್ವವನ್ನು ಜಲನ್ ಕಲ್ರಾಕ್ ಕನ್ಸೋರ್ಟಿಯಂ (JKC) ಗೆ ವರ್ಗಾಯಿಸಲು ನೀಡಿದ್ದ ಅನುಮೋದನೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ತಳ್ಳಿಹಾಕಿದೆ.
ಜೆಕೆಸಿ ಪರವಾಗಿ ಜೆಟ್ ಏರ್‌ವೇಸ್‌ನ ನಿರ್ಣಯ ಯೋಜನೆಯನ್ನು ಎತ್ತಿಹಿಡಿಯುವ ಎನ್‌ಸಿಎಲ್‌ಎಟಿ ನಿರ್ಧಾರದ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಸಾಲಗಾರರ ಮನವಿ ಸಲ್ಲಿಕೆಗೆ ನ್ಯಾಯಮೂರ್ತಿ ಪರ್ದಿವಾಲಾ ಅವರು ಅವಕಾಶ ನೀಡಿದರು.
ಸಾಲಗಾರರು, ಉದ್ಯೋಗಿಗಳು ಮತ್ತು ಇತರ ಮಧ್ಯಸ್ಥಗಾರರ ಹಿತಾಸಕ್ತಿಯನ್ನು ಗಮನಿಸಿ ವಿಮಾನಯಾನ ಸಂಸ್ಥೆಯನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ. ಎನ್ ಸಿಎಲ್ ಎಟಿ ನಿರ್ಧಾರವನ್ನು ಇದೇ ಸಂದರ್ಭದಲ್ಲಿ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು ಆದೇಶ ನೀಡಿದೆ. ಯಾವುದೇ ವಿಷಯದಲ್ಲಿ ಸಂಪೂರ್ಣ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಆದೇಶಗಳನ್ನು ಮತ್ತು ತೀರ್ಪುಗಳನ್ನು ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಹೊಂದಿದೆ.
ಮಾರ್ಚ್ 12 ರಂದು ಎನ್ ಸಿಎಲ್ ಎಟಿ ವಿಮಾನಯಾನ ಸಂಸ್ಥೆಯ ನಿರ್ಣಯ ಯೋಜನೆಯನ್ನು ಎತ್ತಿಹಿಡಿದು ಅದರ ಮಾಲೀಕತ್ವವನ್ನು ಜೆಕೆಸಿಗೆ ವರ್ಗಾಯಿಸಲು ಅನುಮೋದಿಸಿತು.
ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಜೆಸಿ ಫ್ಲವರ್ಸ್ ಅಸೆಟ್ ರೀಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಎನ್‌ಸಿಎಲ್‌ಎಟಿ ತೀರ್ಪನ್ನು ಪ್ರಶ್ನಿಸಿವೆ.
Advertisement