ಮುಂಬೈ: ಮಹಾ ವಿಕಾಸ್ ಅಘಾಡಿ(MVA)ಯು ವೀಲ್ ಮತ್ತು ಬ್ರೇಕ್ ಇಲ್ಲದ ವಾಹನ ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, ಹಿಂದೆ "ದುರಾಡಳಿತ"ದ ಮೂಲಕ ರಾಜ್ಯದ ಜನರನ್ನು "ಲೂಟಿ" ಮಾಡಿದ್ದಾರೆ ಎಂದು ಶುಕ್ರವಾರ ಆರೋಪಿಸಿದರು.
ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಂದು ಧುಲೆಯಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, "ಎಂವಿಎಯ 'ಗಾಡಿ'ಗೆ ಚಕ್ರಗಳು ಮತ್ತು ಬ್ರೇಕ್‌ಗಳಿಲ್ಲ. ಆದರೂ ಡ್ರೈವರ್ ಸೀಟ್‌ನಲ್ಲಿ ಕುಳಿತುಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ರಾಜಕೀಯದಲ್ಲಿ ಅವರ ಏಕೈಕ ಗುರಿ ಲೂಟಿ ಮಾಡುವುದು ಎಂದು ವಾಗ್ದಾಳಿ ನಡೆಸಿದರು.
MVA ಯಂತಹ ಜನರು ಸರ್ಕಾರ ರಚಿಸಿದರೆ, ಅವರು ಪ್ರತಿ ಸರ್ಕಾರಿ ನೀತಿ ಮತ್ತು ಅಭಿವೃದ್ಧಿಯಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತಾರೆ ಎಂದರು.
ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ದೇಶದ ಎಲ್ಲಾ ಬುಡಕಟ್ಟು ಸಮುದಾಯಗಳ ನಡುವೆ ಬಿರುಕು ಮೂಡಿಸುವುದು ಆ ಪಕ್ಷದ ಕಾರ್ಯಸೂಚಿಯಾಗಿದೆ ಎಂದು ಆರೋಪಿಸಿದರು.
ಎರಡೂವರೆ ವರ್ಷ ಎಂವಿಎಯ ದುರಾಡಳಿತವನ್ನು ಮಹಾರಾಷ್ಟ್ರದ ಜನ ಈಗಾಗಲೇ ನೋಡಿದ್ದಾರೆ ಎಂದ ಪ್ರಧಾನಿ ಮೋದಿ, ರಾಜ್ಯದಲ್ಲಿ ಮಹಾಯುತಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು ಮತ್ತು ರಾಜ್ಯದಲ್ಲಿ ಮತ್ತೊಮ್ಮೆ ತಮ್ಮ ಸರ್ಕಾರ ರಚನೆಯಾದ ನಂತರ ಈ ಕಾರ್ಯಗಳು ಮುಂದುವರಿಯುತ್ತವೆ ಎಂದರು.
Advertisement