ಮುಂಬೈ: ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಜಮ್ಮು-ಕಾಶ್ಮೀರದಿಂದ ಭಾರತದ ಸಂವಿಧಾನವನ್ನು ತೆಗೆದುಹಾಕಲು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದು, ಜಗತ್ತಿನ ಯಾವುದೇ ಶಕ್ತಿಯಿಂದಲೂ ಆರ್ಟಿಕಲ್ 370 ಮರುಸ್ಥಾಪನೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನ. 20 ರಂದು ಮತದಾನ ನಡೆಯಲಿರುವ ಮಹಾರಾಷ್ಟ್ರದ ವಿಧಾನಸಭಾ ಕ್ಷೇತ್ರಗಳಲ್ಲಿ ನ.08 ರಂದು ಪ್ರಚಾರ ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ್ದು, ಜನರಿಗೆ ಒಗ್ಗಟ್ಟಾಗಿರಲು ಕರೆ ನೀಡಿದ್ದಾರೆ.
ಒಗ್ಗಟ್ಟಾಗಿದ್ದರೆ ಸುರಕ್ಷವಾಗಿರುತ್ತೀರಿ ಎಂದು ಪ್ರಧಾನಿ ಮೋದಿ ಜನರಿಗೆ ಸಾರ್ವಜನಿಕ ಸಮಾವೇಶದಲ್ಲಿ ಕರೆ ನೀಡಿದ್ದಾರೆ. ದಲಿತರು ಮತ್ತು ಆದಿವಾಸಿಗಳನ್ನು ಕೆರಳಿಸಲು ಖಾಲಿ ಪುಸ್ತಕಗಳನ್ನು ತೋರಿಸಿ ಸಂವಿಧಾನ ಎಂದು ರವಾನಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನದ ಕಾರ್ಯಸೂಚಿಯನ್ನು ಪ್ರೋತ್ಸಾಹಿಸಬಾರದು ಮತ್ತು ಪ್ರತ್ಯೇಕತಾವಾದಿಗಳ ಭಾಷೆಯಲ್ಲಿ ಮಾತನಾಡಬಾರದು ಎಂದು ಪ್ರಧಾನಿ ಹೇಳಿದ್ದು, ಜನರ ಆಶೀರ್ವಾದ ಇರುವವರೆಗೂ ಈ ಕಾರ್ಯಸೂಚಿ ಯಶಸ್ವಿಯಾಗುವುದಿಲ್ಲ ಎಂದು ಮೋದಿ ಹೇಳಿದರು.
"ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 370ನೇ ವಿಧಿಯನ್ನು ವಾಪಸ್ ತರುವ ಕುರಿತು ಹೇಗೆ ನಿರ್ಣಯ ಮಂಡಿಸಲಾಯಿತು ಮತ್ತು ಬಿಜೆಪಿ ಶಾಸಕರು ಪ್ರತಿಭಟಿಸಿದಾಗ ಅವರನ್ನು ಹೊರಹಾಕಲಾಯಿತು ಎಂಬುದನ್ನು ನೀವು ಟಿವಿಯಲ್ಲಿ ನೋಡಿದ್ದೀರಿ. ಇದನ್ನು ದೇಶ ಮತ್ತು ಮಹಾರಾಷ್ಟ್ರ ಅರ್ಥಮಾಡಿಕೊಳ್ಳಬೇಕು" ಎಂದು ಮೋದಿ ಹೇಳಿದರು.
ಜಾತಿ ಮತ್ತು ಸಮುದಾಯಗಳನ್ನು ವಿಭಜಿಸುವ ಅಪಾಯಕಾರಿ ಆಟವನ್ನು ಕಾಂಗ್ರೆಸ್ ಆಡುತ್ತಿದೆ ಎಂದು ಆರೋಪಿಸಿರುವ ಪ್ರಧಾನಿ ಮೋದಿ,
ಎಸ್‌ಟಿ (ಪರಿಶಿಷ್ಟ ಪಂಗಡಗಳು), ಎಸ್‌ಸಿ (ಪರಿಶಿಷ್ಟ ಜಾತಿಗಳು) ಮತ್ತು ಒಬಿಸಿಗಳು (ಇತರ ಹಿಂದುಳಿದ ವರ್ಗಗಳು) ಒಗ್ಗಟ್ಟಾಗಿ ಉಳಿದರೆ, ಕಾಂಗ್ರೆಸ್ ರಾಜಕೀಯ ಕೊನೆಗೊಳ್ಳುತ್ತದೆ," ಕಾಂಗ್ರೆಸ್ ಒಂದು ಜಾತಿಯನ್ನು ಮತ್ತೊಂದು ಜಾತಿಯ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದೆ ಮತ್ತು ಎಸ್‌ಸಿಯ ಒಗ್ಗಟ್ಟನ್ನು ದುರ್ಬಲಗೊಳಿಸಲು ಬಯಸುತ್ತದೆ ಎಂದು ಆರೋಪಿಸಿದ್ದಾರೆ.
"ನೆಹರೂ ಕಾಲದಿಂದಲೂ ಕಾಂಗ್ರೆಸ್ ಮತ್ತು ಅವರ ಕುಟುಂಬ ಮೀಸಲಾತಿಯನ್ನು ವಿರೋಧಿಸಿತು ಮತ್ತು ಈಗ ಅವರ ನಾಲ್ಕನೇ ತಲೆಮಾರಿನ 'ಯುವರಾಜ' (ರಾಜಕುಮಾರ) ಜಾತಿ ವಿಭಜನೆಗಾಗಿ ಕೆಲಸ ಮಾಡುತ್ತಿದ್ದಾರೆ. ಏಕ್ ಹೈ ತೋ ಸೇಫ್ ಹೈ' (ನಾವು ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ)" ಎಂದು ಮೋದಿ ಹೇಳಿದ್ದಾರೆ.
ಭಾರತದ ವಿಭಜನೆಗೆ ಕಾರಣವಾದ ಧರ್ಮದ ಮೇಲೆ ಕಾಂಗ್ರೆಸ್ ರಾಜಕೀಯ ಮಾಡಿತು ಮತ್ತು ಈಗ ಪಕ್ಷವು ಜಾತಿ ರಾಜಕಾರಣದಲ್ಲಿ ತೊಡಗಿದೆ ಎಂದು ಮೋದಿ ಆರೋಪಿಸಿದ್ದು, ದೇಶದ ವಿರುದ್ಧ ಇದಕ್ಕಿಂತ ದೊಡ್ಡ ಷಡ್ಯಂತ್ರ ಇನ್ನೊಂದಿಲ್ಲ ಎಂದು ಉತ್ತರ ಮಹಾರಾಷ್ಟ್ರ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಹೇಳಿದರು.
Advertisement