
ನವದೆಹಲಿ: ಎರಡು ಬೈಕ್ ಗಳ ನಡುವಿನ ಮುಖಾಮುಖಿ ಡಿಕ್ಕಿಯಿಂದಾಗಿ ಪ್ರಜ್ಞೆ ಇಲ್ಲದೆ ರಸ್ತೆ ಮೇಲೆ ಬಿದ್ದಿದ್ದ 35 ವರ್ಷದ ಯುವಕನೊಬ್ಬನಿಗೆ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು CPR ಮೂಲಕ ಜೀವ ಉಳಿಸಿದ್ದಾರೆ.
ಭಾನುವಾರ ಬೆಳಗ್ಗೆ 7-45ರ ಸುಮಾರಿನಲ್ಲಿ ಪಾಲಮ್ ಗೇಟ್ ಬಳಿಯ ರಸ್ತೆಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಡ್ ಕಾನ್‌ಸ್ಟೆಬಲ್ ಸತೀಶ್ ಕುಮಾರಿ, ದ್ವಾರಕಾ ಟ್ರಾಫಿಕ್ ಸರ್ಕಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಸ್ತೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ 35 ವರ್ಷದ ಯುವಕ ಅಮಿತ್ ಡೋಗ್ರಾ ಅವರಿಗೆ CPR ಮಾಡಿದ್ದಾರೆ.
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದನ್ನು ನೋಡಿದ ಸತೀಶ್ ಕುಮಾರಿ, ದಾರಿಹೋಕರ ಸಹಾಯದಿಂದ ಯುವಕನ ಸಹಾಯಕ್ಕೆ ಧಾವಿಸಿದ್ದು, ಸಿಪಿಆರ್ ಮಾಡುವ ಮೂಲಕ ಆತನಿಗೆ ಮತ್ತೆ ಪ್ರಜ್ಞೆ ಬರುವಂತೆ ಮಾಡಿದ್ದಾರೆ. ನಂತರ ವ್ಯಾನ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹೃದಯ ಬಡಿತವನ್ನು ನಿಲ್ಲಿಸಿದಾಗ ಅಥವಾ ಮೆದುಳು ಮತ್ತು ಇತರ ಪ್ರಮುಖ ಅಂಗಗಳಿಗೆ ರಕ್ತ ಪರಿಚಲನೆಯಾಗದಿದ್ದಾಗ CPR ಅಥವಾ ಕಾರ್ಡಿಯೋಪಲ್ಮನರಿ ಮೂಲಕ ಪುನರುಜ್ಜೀವನವನ್ನು ನೀಡಲಾಗುತ್ತದೆ. ಸಂತ್ರಸ್ತನ ಎದೆಯನ್ನು ಸಂಕುಚಿತಗೊಳಿಸುವ ಅಥವಾ ಆಮ್ಲಜನಕವನ್ನು ಬಾಯಿಯಿಂದ ಬಾಯಿಗೆ ನೀಡುವ ಪ್ರಕ್ರಿಯೆಯನ್ನು ಇದು ಒಳಗೊಂಡಿರುತ್ತದೆ.
Advertisement