ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಪೂರ್ಣ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದು, ರಾಜ್ಯ ಚುನಾವಣೆಯ ನಂತರ ಮೈತ್ರಿ ಪಾಲುದಾರರು ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
ನವೆಂಬರ್ 20 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾ, ಚುನಾವಣೆಯಲ್ಲಿ ಮಹಾಯುತಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಾ ಮೂರು ಮೈತ್ರಿ ಪಾಲುದಾರರಾದ ಬಿಜೆಪಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಚುನಾವಣೆಯ ನಂತರ ನೀಡಿದ ಆಶ್ವಾಸನೆಗಳಿಗೆ ಆದ್ಯತೆ ನೀಡಿ ಮೂರು ಪಕ್ಷಗಳ ಸಚಿವರ ಸಮಿತಿಯನ್ನು ರಚಿಸಲಾಗುವುದು ಎಂದು ಶಾ ಹೇಳಿದರು.
ಸದ್ಯ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ಚುನಾವಣೆಯ ನಂತರ ಎಲ್ಲಾ ಮೂರು ಮೈತ್ರಿ ಪಾಲುದಾರರು ಮುಖ್ಯಮಂತ್ರಿಯನ್ನು ನಿರ್ಧರಿಸುತ್ತಾರೆ. ಉದ್ಧವ್ ಠಾಕ್ರೆ ಏಕನಾಥ್ ಶಿಂಧೆಗಿಂತ ತಮ್ಮ ಮಗನಿಗೆ ಆದ್ಯತೆ ನೀಡಿದ್ದರಿಂದ ಶಿವಸೇನೆ ವಿಭಜನೆಯಾಯಿತು ಮತ್ತು ಶರದ್ ಪವಾರ್ ಅಜಿತ್ ಪವಾರ್‌ಗಿಂತ ತಮ್ಮ ಮಗಳಿಗೆ ಆದ್ಯತೆ ನೀಡಿದ್ದರಿಂದ ಎನ್ ಸಿಪಿ ವಿಭಜನೆಯಾಯಿತು. ಈ ಪಕ್ಷಗಳು ತಮ್ಮ ಕುಟುಂಬದ ಸದಸ್ಯರಿಗೆ ಆದ್ಯತೆ ನೀಡಿ ಪಕ್ಷಗಳು ಬೇರ್ಪಟ್ಟವು. ಆದರೆ ವಿನಾಕಾರಣ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಕುಟುಂಬ ಆಧಾರಿತ ರಾಜಕಾರಣದ ವಿರುದ್ಧವಾಗಿದೆ ಎಂದು ಹೇಳಿದರು.
ಬಿಜೆಪಿ ಮೀಸಲಾತಿ ವಿರೋಧಿ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಅಮಿತ್ ಶಾ, ಒಬಿಸಿಗಳಿಗೆ ಮೀಸಲಾತಿ ನೀಡಿದ್ದು ಮೋದಿ ಸರ್ಕಾರವಾಗಿದ್ದು, ಮೀಸಲಾತಿಯನ್ನು ಬಲಪಡಿಸುತ್ತೇವೆ ಎಂದರು.
Advertisement