ಗುವಾಹಟಿ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಿನ್ನೆ ಸೋಮವಾರ 10 ಉಗ್ರರನ್ನು ಕೊಂದಿರುವುದಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಹೇಳಿಕೆ ನೀಡಿದ ನಂತರ, ಇಂದು ಬೆಳಗ್ಗೆ ಇಬ್ಬರು ವೃದ್ಧರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿನ್ನೆ ಶಂಕಿತ ಉಗ್ರಗಾಮಿಗಳು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ ಜಕುರಾಧೋರ್ ಕರೋಂಗ್ ಪ್ರದೇಶದಲ್ಲಿ ಶೋಧ ನಡೆಸಿದಾಗ ಲೈಶ್ರಾಮ್ ಬಾಲೆನ್ ಮತ್ತು ಮೈಬಮ್ ಕೇಶೋ ಅವರ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆದರೆ ಕುಕಿ-ಜೋ ಸಂಘಟನೆ, ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಸಿಆರ್‌ಪಿಎಫ್ ಗುಂಡಿಗೆ ಬಲಿಯಾದ 10 ಜನರು ಉಗ್ರಗಾಮಿಗಳಲ್ಲ, ಕುಕಿ-ಜೋ "ಗ್ರಾಮ ಸ್ವಯಂಸೇವಕರು" ಎಂದು ಆರೋಪಿಸಿದೆ. ಅವರನ್ನು ಹೊಂಚು ಹಾಕಿ ಹತ್ಯೆ ಮಾಡಲಾಗಿದೆ ಎಂದು ಐಟಿಎಲ್‌ಎಫ್ ಹೇಳಿದೆ.
ರಾಜ್ಯವು ಈ ಹಿಂದೆ ಇಂತಹ ಗುಂಡಿನ ಚಕಮಕಿ ದಾಳಿಯನ್ನು ಕಂಡಿರಲಿಲ್ಲ. ಸಿಆರ್ ಪಿಎಫ್ ಮತ್ತು ಮೈತೈ ರಾಜ್ಯ ಪಡೆಗಳು ಎಲ್ಲಾ ಗ್ರಾಮದ ಸ್ವಯಂಸೇವಕರನ್ನು ಹೊಂಚು ಹಾಕಿ ಹತ್ಯೆಗೈದಿರುವುದನ್ನು ಇದು ಸೂಚಿಸುತ್ತದೆ ಎಂದು ಐಟಿಎಲ್ ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಸ್ವಯಂಸೇವಕರು ನಿಜವಾಗಿಯೂ ಶಸ್ತ್ರಸಜ್ಜಿತರಾಗಿದ್ದರೆ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ಉದ್ದೇಶಿಸಿದ್ದರೆ, ದೂರದಿಂದ ಗುಂಡಿನ ದಾಳಿಯ ಒಂದು ಘಟನೆಯಲ್ಲಿ ಅನೇಕರನ್ನು ಕೊಲ್ಲುವುದು ಅಸಾಧ್ಯವಾಗಿತ್ತು ಎಂದು ಸಂಘಟನೆ ಹೇಳಿದೆ.
ಕಳೆದ ಆಗಸ್ಟ್ ನಲ್ಲಿ ಕುಕಿ-ಜೋ ವಿರುದ್ಧದ ಆಪಾದಿತ ನರಮೇಧ ಅಭಿಯಾನದ ವಿರುದ್ಧ ಕುಕಿ ವಿದ್ಯಾರ್ಥಿಗಳ ಸಂಘಟನೆಯ ಸದಸ್ಯರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.
ಸೋಮವಾರದ ಘಟನೆಯ ನಂತರ, ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಜಿಲ್ಲೆಯಲ್ಲಿ ವಿಧಿಸಲಾಯಿತು. ಇಂಫಾಲ್ ಪಶ್ಚಿಮ ಜಿಲ್ಲೆಯ ಕೆಲವು ಭಾಗಗಳಿಂದ ರಾತ್ರಿಯಿಡೀ ಗುಂಡಿನ ದಾಳಿ ನಡೆದಿದೆ.
ಜಕುರಾಧೋರ್ ಮತ್ತು ಬೊರೊಬೆಕ್ರಾ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಸಿಆರ್‌ಪಿಎಫ್ ಪೋಸ್ಟ್‌ನ ಮೇಲೆ “ಶಸ್ತ್ರಸಜ್ಜಿತ ಉಗ್ರರು” ದಾಳಿ ನಡೆಸಿದ್ದಾರೆ ಎಂದು ಮಣಿಪುರ ಪೊಲೀಸರು ಸೋಮವಾರ ಹೇಳಿಕೆ ನೀಡಿದ್ದರು. ಸಿಆರ್‌ಪಿಎಫ್ ಮತ್ತು ಪೊಲೀಸರು ದಾಳಿಗೆ ತೀವ್ರವಾಗಿ ಪ್ರತಿದಾಳಿ ನಡೆಸಿದರು.
ಗುಂಡಿನ ಚಕಮಕಿ ನಿಲ್ಲಿಸಿದ ನಂತರ ಆ ಪ್ರದೇಶದಲ್ಲಿ ಶೋಧ ನಡೆಸಲಾಗಿದ್ದು, 10 ಉಗ್ರರ ಶವಗಳನ್ನು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಬ್ಬ ಸಿಆರ್‌ಪಿಎಫ್ ಯೋಧ ಗಾಯಗೊಂಡಿದ್ದು, ಅವರನ್ನು ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
Advertisement