ಉತ್ತರ 24 ಪರಗಣ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಜಗತ್‌ದಲ್ ಪ್ರದೇಶದ ತೃಣಮೂಲ ಕಾಂಗ್ರೆಸ್ ನಾಯಕನನ್ನು ಬುಧವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ವ್ಯಕ್ತಿಯನ್ನು ಜಗತ್‌ದಲ್ ವಾರ್ಡ್ ನಂ 12 ರ ಟಿಎಂಸಿ ಮಾಜಿ ಅಧ್ಯಕ್ಷ ಅಶೋಕ್ ಶಾ ಎಂದು ಗುರುತಿಸಲಾಗಿದೆ.
ಜಗತ್‌ದಲ್ ಪೊಲೀಸ್ ಠಾಣೆಯಿಂದ ಕೇವಲ ನೂರು ಮೀಟರ್ ದೂರದಲ್ಲಿರುವ ಟೀ ಸ್ಟಾಲ್ ಮುಂದೆ ನಿಂತಿದ್ದ ಟಿಎಂಸಿ ಮುಖಂಡ ಶಾ ಮೇಲೆ ಬಾಂಬ್ ಎಸೆದ ದುಷ್ಕರ್ಮಿಗಳು, ಅವರ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶಾ ಅವರನ್ನು ತಕ್ಷಣ ಸಮೀಪದ ಭಟ್ಪರಾ ರಾಜ್ಯ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಸಾವನ್ನಪ್ಪಿದರು ಎಂದು ವೈದ್ಯರು ಘೋಷಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡ ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement