ನವದೆಹಲಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಕುರಿತು ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರಿಂದ ತೀವ್ರವಾದ ಖಂಡನೆ ವ್ಯಕ್ತವಾಗಿದೆ.
ಫಡ್ನವೀಸ್ ಅವರ ಧರ್ಮಯುದ್ಧ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಕನ್ಹಯ್ಯಾ ಕುಮಾರ್, ಧರ್ಮವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಅಂತಹ ಜನರು ಧರ್ಮ ರಕ್ಷಿಸುತ್ತಿಲ್ಲ. ಫಢ್ನವೀಸ್ ಅವರ ಪತ್ನಿ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡ್ತಾ ಇರ್ತಾರೆ ಎಂಬ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ.
ಬುಧವಾರ ನಾಗ್ಪುರದಲ್ಲಿ ಮಾತನಾಡಿದ ಕನ್ಹಯ್ಯಾ ಕುಮಾರ್, ಚುನಾವಣೆಯನ್ನು ಫಢ್ನವೀಸ್ 'ಧರ್ಮಯುದ್ಧ' ಎಂದು ಹೇಳುತ್ತಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಿಸುವುದು ನಮ್ಮ ಧರ್ಮವಾಗಿದೆ. ಧರ್ಮದ ರಕ್ಷಣೆ ಕುರಿತು ಮಾತನಾಡುವ ಯಾವುದೇ ನಾಯಕರು ಅವರ ಮಕ್ಕಳು ಕೂಡಾ ಧರ್ಮ ರಕ್ಷಣೆ ಹೋರಾಟದಲ್ಲಿ ಸೇರಬೇಕು. ಧರ್ಮವನ್ನು ನಾವು ರಕ್ಷಿಸಬೇಕಾದರೆ ಎಲ್ಲಾರೂ ಒಗ್ಗೂಡಿ ಅದನ್ನು ರಕ್ಷಿಸೋಣ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಉಪ ಮುಖ್ಯಮಂತ್ರಿ ಫಡ್ನವೀಸ್ ಪತ್ನಿಯಂತವರಿಂದ ನಾವು ಧರ್ಮ ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕನ್ನಯ್ಯಾ ಕುಮಾರ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಕನ್ಹಯ್ಯಾ ನಕ್ಸಲ್ ಅಫ್ಜಲ್ ಗುರು ಬೆಂಬಲಿಗರಾಗಿದ್ದು, ಅಮೃತ ಫಡ್ನವೀಸ್ ಗುರಿಯಾಗಿಸಿ, ಮರಾಠಿ ಮಹಿಳೆಯರನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
Advertisement