ಮುಂಬೈ: ಚುನಾವಣಾ ಆಯೋಗವು ಮಹಾರಾಷ್ಟ್ರದಲ್ಲಿ ಕಳೆದ ಒಂದು ತಿಂಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 6,382 ದೂರುಗಳನ್ನು ಸ್ವೀಕರಿಸಿದೆ ಮತ್ತು ಒಂದನ್ನು ಹೊರತುಪಡಿಸಿ ಎಲ್ಲವನ್ನೂ ಪರಿಹರಿಸಲಾಗಿದೆ. ಇದೇ ವೇಳೆ 536 ಕೋಟಿ ರೂಪಾಯಿಗೂ ಹೆಚ್ಚು ನಗದು ಮತ್ತು ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಅಕ್ಟೋಬರ್ 15 ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಘೋಷಣೆಯೊಂದಿಗೆ ಮಾದರಿ ನೀತಿ ಸಂಹಿತೆ(ಎಂಸಿಸಿ) ಜಾರಿಗೆ ಬಂದಿದ್ದು, ನವೆಂಬರ್ 14 ರ ವರೆಗೆ ಚುನಾವಣಾ ಸಮಿತಿಯ cVIGIL ಅಪ್ಲಿಕೇಶನ್ ಮೂಲಕ 6,382 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ದೂರು ದಾಖಲಾದ ನಂತರ, ಸಂಬಂಧಿತ ತಂಡವು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.
ಅಕ್ಟೋಬರ್ 15 ರಿಂದ ನವೆಂಬರ್ 14ರ ವರೆಗೆ ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳು 536.45 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿವೆ. ಇದರಲ್ಲಿ ಅಕ್ರಮ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಅಮೂಲ್ಯ ಲೋಹಗಳು ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.
ನವೆಂಬರ್ 20 ರಂದು ಒಂದೇ ಹಂತದಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
Advertisement