ಇಂಫಾಲ: ಮಣಿಪುರದಲ್ಲಿ ನಿಯೋಜನೆಗೊಂಡಿರುವ ಎಲ್ಲಾ ಭದ್ರತಾ ಪಡೆಗಳಿಗೆ ರಾಜ್ಯದಲ್ಲಿ ಸುವ್ಯವಸ್ಥೆ ಮತ್ತು ಶಾಂತಿಯನ್ನು ಮರುಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ತಿಳಿಸಿದೆ.
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸ್ ಠಾಣೆ ಮತ್ತು ಪಕ್ಕದ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿದ 11 ಶಂಕಿತ ಉಗ್ರರು ಗುಂಡಿನ ಚಕಮಕಿಯಲ್ಲಿ ಹತರಾದ ನಂತರ ಮಣಿಪುರದಲ್ಲಿ ಕಳೆದ ಸೋಮವಾರ ಹೊಸ ಹಿಂಸಾಚಾರ ಸಂಭವಿಸಿದೆ.
ಒಂದು ದಿನದ ನಂತರ, ಅದೇ ಜಿಲ್ಲೆಯಿಂದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಆರು ನಾಗರಿಕರನ್ನು ಅಪಹರಿಸಿದ್ದರು.
"ಮಣಿಪುರದ ಭದ್ರತಾ ಸನ್ನಿವೇಶವು ಕಳೆದ ಕೆಲವು ದಿನಗಳಿಂದ ದುರ್ಬಲವಾಗಿದೆ. ಸಂಘರ್ಷದಲ್ಲಿರುವ ಎರಡೂ ಸಮುದಾಯಗಳ ಶಸ್ತ್ರಸಜ್ಜಿತ ದುಷ್ಕರ್ಮಿಗಳು ದುರದೃಷ್ಟಕರ ಜೀವಹಾನಿಗೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸಲು ಹಿಂಸಾಚಾರದಲ್ಲಿ ತೊಡಗಿದ್ದಾರೆ" ಎಂದು ಸಚಿವಾಲಯ ಶನಿವಾರ ಹೇಳಿದೆ.
ಹಿಂಸಾತ್ಮಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ. ಪರಿಣಾಮಕಾರಿ ತನಿಖೆಗಾಗಿ ಪ್ರಮುಖ ಪ್ರಕರಣಗಳನ್ನು ಎನ್ಐಎಗೆ ಹಸ್ತಾಂತರಿಸಲಾಗಿದೆ ಎಂದೂ ಗೃಹ ಸಚಿವಾಲಯ ಮಾಹಿತಿ ನೀಡಿದೆ.
"ಸುವ್ಯವಸ್ಥೆ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭದ್ರತಾ ಪಡೆಗಳಿಗೆ ನಿರ್ದೇಶಿಸಲಾಗಿದೆ. ಹಿಂಸಾತ್ಮಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮವನ್ನು ಪ್ರಾರಂಭಿಸಲಾಗುವುದು" ಎಂದು ಅದು ಹೇಳಿದೆ.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವದಂತಿಗಳನ್ನು ನಂಬಬೇಡಿ ಮತ್ತು ಭದ್ರತಾ ಪಡೆಗಳೊಂದಿಗೆ ಸಹಕರಿಸಿ ಎಂದು ಕೇಂದ್ರ ಗೃಹ ಸಚಿವಾಲಯ ಜನತೆಗೆ ಕರೆ ನೀಡಿದೆ.
ಕೇಂದ್ರ ಸರ್ಕರ ಗುರುವಾರದಂದು ಹಿಂಸಾಚಾರ-ಪೀಡಿತ ಜಿರಿಬಾಮ್ ಸೇರಿದಂತೆ ಮಣಿಪುರದ ಆರು ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು ಪುನಃ ಜಾರಿಗೊಳಿಸಿತ್ತು. ಮಣಿಪುರ ಸರ್ಕಾರ ಅಕ್ಟೋಬರ್ 1ರಂದು ಇಡೀ ರಾಜ್ಯದಲ್ಲಿ AFSPA ನ್ನು ಹೇರಿದ ನಂತರ ಈ ಹೊಸ ಆದೇಶ 19 ಪೊಲೀಸ್ ಠಾಣೆ ಪ್ರದೇಶಗಳನ್ನು ಹೊರತುಪಡಿಸಿದೆ.
ಇಂಫಾಲ್, ಲ್ಯಾಂಫಾಲ್, ಸಿಟಿ, ಸಿಂಗ್ಜಮೇ, ಸೆಕ್ಮೈ, ಲಮ್ಸಾಂಗ್, ಪಟ್ಸೋಯಿ, ವಾಂಗೋಯ್, ಪೊರಂಪಾಟ್, ಹೀಂಗಾಂಗ್, ಲಾಮ್ಲೈ, ಇರಿಲ್‌ಬಂಗ್, ಲೈಮಾಖೋಂಗ್, ತೌಬಲ್, ಬಿಷ್ಣುಪುರ್, ನಂಬೋಲ್, ಮೊಯಿಂಗ್, ಕಬಾಮ್‌ಚಿಂಗ್, ಜೆ ಪೊಲೀಸ್ ಠಾಣೆಗಳನ್ನು ಮಣಿಪುರ ಸರ್ಕಾರದ ಅಕ್ಟೋಬರ್ 1 ರ ಆದೇಶದಿಂದ ಹೊರಗಿಟ್ಟಿದೆ.
ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ AFSPA ಅಡಿಯಲ್ಲಿ ಒಂದು ಪ್ರದೇಶ ಅಥವಾ ಜಿಲ್ಲೆಯನ್ನು "ಅಸ್ತವ್ಯಸ್ತ" ಎಂದು ಸೂಚಿಸಲಾಗುತ್ತದೆ.
AFSPA, ಪ್ರಕ್ಷುಬ್ಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳಿಗೆ "ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ"ಗಾಗಿ ಅದು ಅಗತ್ಯವೆಂದು ಭಾವಿಸಿದರೆ ಶೋಧಿಸಲು, ಬಂಧಿಸಲು ಮತ್ತು ಗುಂಡಿನ ದಾಳಿ ನಡೆಸಲು ವ್ಯಾಪಕ ಅಧಿಕಾರವನ್ನು ನೀಡುತ್ತದೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಸೆಕ್ಮಾಯಿ ಮತ್ತು ಲಮ್ಸಾಂಗ್, ಇಂಫಾಲ್ ಪೂರ್ವ ಜಿಲ್ಲೆಯ ಲಾಮ್ಲೈ, ಜಿರಿಬಾಮ್ ಜಿಲ್ಲೆಯ ಜಿರಿಬಾಮ್, ಕಾಂಗ್ಪೋಕ್ಪಿಯ ಲೀಮಾಖೋಂಗ್ ಮತ್ತು ಬಿಷ್ಣುಪುರದ ಮೊಯಿರಾಂಗ್ AFSPA ನ್ನು ಮರುಹೊಂದಿಸಲಾದ ಪೊಲೀಸ್ ಠಾಣೆ ಪ್ರದೇಶಗಳಾಗಿವೆ.
ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈಟೈಸ್ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
Advertisement