ಅಮರಾವತಿ: ಸಾರ್ವಜನಿಕ ಸಭೆಗೆ ಆಗಮಿಸಿದ ಬಿಜೆಪಿ ಮಾಜಿ ಸಂಸದ ನವನೀತ್ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಜನರ ಗುಂಪು ಹಲ್ಲೆ ನಡೆಸಿದೆ. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಖಲ್ಲಾರ್ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು 45 ಜನರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ ಮತ್ತು ಅವರಲ್ಲಿ ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ರಾತ್ರಿ 10 ಗಂಟೆ ಸುಮಾರಿಗೆ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ರಾಣಾ ತನ್ನ ಬೆಂಬಲಿಗರೊಂದಿಗೆ ಆಗಮಿಸಿದಾಗ ಜನರ ಗುಂಪಿನಲ್ಲಿದ್ದ ಕೆಲವರು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದು, ಅಶ್ಲೀಲ ಸನ್ನೆ ಮಾಡಿದ್ದಾರೆ. ಈ ವೇಳೆ ಆಕೆಯ ಬೆಂಬಲಿಗರು ಹಾಗೂ ಗುಂಪಿನಲ್ಲಿದ್ದ ಆರೋಪಿಗಳೊಂದಿಗೆ ಘರ್ಷಣೆ ನಡೆದಿದ್ದು, ನವನೀತ್ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಕುರ್ಚಿಗಳನ್ನು ಎಸೆದಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಅಮರಾವತಿ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಆನಂದ್ ಹೇಳಿದ್ದಾರೆ.
ರಾಣಾ ನಂತರ ಸಮೀಪದ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಗಲಭೆ, ಕೊಲೆ ಯತ್ನ ಮತ್ತಿತರ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಐವರನ್ನು ಹೆಸರಿಸಲಾಗಿದ್ದು, 40 ಮಂದಿ ಅಪರಿಚಿತರಾಗಿದ್ದಾರೆ. ಮೂವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
Advertisement