ನವದೆಹಲಿ: ಝಾನ್ಸಿಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 10 ನವಜಾತ ಶಿಶುಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ನೊಟೀಸ್ ಜಾರಿ ಮಾಡಿರುವುದಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC) ತಿಳಿಸಿದೆ.
ಘಟನೆಯ ವರದಿಗಳನ್ನು "ಗೊಂದಲಕಾರಿ" ಎಂದು ವ್ಯಾಖ್ಯಾನಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಒಂದು ವಾರದೊಳಗೆ ವಿವರವಾದ ವರದಿಯನ್ನು ಕೇಳಿದೆ. ವರದಿಗಳ ವಿಷಯಗಳು "ನಿಜಕ್ಕೂ ಗೊಂದಲವನ್ನುಂಟುಮಾಡುತ್ತವೆ ಮತ್ತು ನಿರ್ಲಕ್ಷ್ಯವನ್ನು ಸೂಚಿಸುತ್ತವೆ ಎಂದು ಆಯೋಗವು ಗಮನಿಸಿದೆ, ಶಿಶುಗಳು ಸರ್ಕಾರಿ ಸಂಸ್ಥೆಯ ಆರೈಕೆಯಲ್ಲಿದ್ದ ಕಾರಣ ಸಂತ್ರಸ್ತರ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ.
ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (NICU) ಮೊನ್ನೆ ಶುಕ್ರವಾರ ರಾತ್ರಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 10 ನವಜಾತ ಶಿಶುಗಳು ಮೃತಪಟ್ಟಿವೆ ಎಂಬ ಮಾಧ್ಯಮ ವರದಿಯನ್ನು ಸ್ವಯಂ ಪ್ರೇರಿತವಾಗಿ ಸ್ವೀಕರಿಸಲಾಗಿದೆ ಎಂದು ಎನ್‌ಎಚ್‌ಆರ್‌ಸಿ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯಲ್ಲಿ 16 ಶಿಶುಗಳಿಗೆ ಗಾಯಗಳಾಗಿದ್ದು, 37 ಮಕ್ಕಳನ್ನು ರಕ್ಷಿಸಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಪ್ರಾಣ ಕಳೆದುಕೊಂಡ ಶಿಶುಗಳು ಇನ್ಕ್ಯುಬೇಟರ್‌ಗಳಲ್ಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವಾರದೊಳಗೆ ವಿವರವಾದ ವರದಿಯನ್ನು ಕೋರಿ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಲಾಗಿದೆ ಎಂದು ಮಾನವ ಹಕ್ಕು ಆಯೋಗ ಹೇಳಿದೆ.
ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಅಧಿಕಾರಿಗಳು ಕೈಗೊಂಡಿರುವ ಅಥವಾ ಪ್ರಸ್ತಾಪಿಸಿದ ಕ್ರಮಗಳ ಬಗ್ಗೆಯೂ ತಿಳಿಯಲು ಬಯಸುವುದಾಗಿ ಆಯೋಗ ಹೇಳಿದೆ. ಬೆಂಕಿ ಅವಘಡದ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ನಿನ್ನೆ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದೆ.
Advertisement