ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನಡೆದ ಮತದಾನ ಬುಧವಾರ ಸಂಜೆ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಎರಡು ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ.
ಮಹಾರಾಷ್ಟ್ರದಲ್ಲಿ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಹಲವಾರು ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿ-ಸೇನಾ-ಎನ್‌ಸಿಪಿ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿವೆ.
ಪಿ-ಮಾರ್ಕ್ ಪ್ರಕಾರ, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟವು 137 ರಿಂದ 157 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 126 ರಿಂದ 146 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಇತರರು 2 ರಿಂದ 8 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದು, 150 ರಿಂದ 170 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ ನೇತೃತ್ವದ ಒಕ್ಕೂಟವು 110 ರಿಂದ 130 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಇತರರು 8 ರಿಂದ 10 ಸ್ಥಾನಗಳನ್ನು ಗಳಿಸುತ್ತಾರೆ.
ಈ ಫಲಿತಾಂಶಗಳು ಬಿಜೆಪಿ ಮೈತ್ರಿಯು ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೇರಲು ಸಜ್ಜಾಗಿದೆ ಎಂದು ಸೂಚಿಸುತ್ತದೆ. ಆದಾಗ್ಯೂ, ನವೆಂಬರ್ 23 ರಂದು ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ.
ಮಹಾರಾಷ್ಟ್ರದ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಅಧಾರಕ್ಕೆ ಬರಲಿದೆ ಎಂದು ಹೇಳಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟವು 175 ರಿಂದ 195 ಸ್ಥಾನಗಳನ್ನು ಪಡೆದುಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದೆ. ವಿರೋಧ ಪಕ್ಷಗಳ ಮೈತ್ರಿಕೂಟ MVA 85 ಮತ್ತು 112 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.
ಜಾರ್ಖಂಡ್ ನಲ್ಲೂ ಎನ್ ಡಿಎಗೆ ಅಧಿಕಾರ
ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ, ಪ್ರಮುಖ ರಾಜಕೀಯ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಇದ್ದರೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 42 ರಿಂದ 48 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಆದರೆ ಎಜೆಎಸ್‌ಯು 2 ರಿಂದ 5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಮತ್ತೊಂದೆಡೆ, ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ 16 ರಿಂದ 23 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ 8 ರಿಂದ 14 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಎಕ್ಸಿಟ್ ಪೋಲ್ ತೀವ್ರ ಸ್ಪರ್ಧೆಯನ್ನು ಸೂಚಿಸುತ್ತಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಡಳಿತ ಪಕ್ಷಕ್ಕಿಂತ ಬಿಜೆಪಿ ಮೈತ್ರಿ ಸ್ವಲ್ಪ ಮುಂದೆ ಇದೆ.
Advertisement