ಇಂಫಾಲ್: ಮಣಿಪುರ ಸರ್ಕಾರವು ಬುಧವಾರ ಮೊಬೈಲ್ ಇಂಟರ್ನೆಟ್ ಸೇವೆ ಅಮಾನತು ಆದೇಶವನ್ನು ಏಳು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನಗಳವರೆಗೆ ವಿಸ್ತರಿಸಿದೆ.
ಹೆಚ್ಚುತ್ತಿರುವ ಹಿಂಸಾಚಾರದ ಮಧ್ಯೆ, ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಸುವ ವಿಷಯವನ್ನು ಸಮಾಜ ವಿರೋಧಿ ಶಕ್ತಿಗಳು ಹರಡುವುದನ್ನು ತಡೆಯಲು ಸರ್ಕಾರ ನವೆಂಬರ್ 16 ರಂದು ಎರಡು ದಿನಗಳವರೆಗೆ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಸೋಮವಾರ ಅದನ್ನು ಮತ್ತೆ ಎರಡು ದಿನ ವಿಸ್ತರಿಸಲಾಗಿತ್ತು.
ಇದೀಗ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ರಾಜ್ಯ ಸರ್ಕಾರವು ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಕಕ್ಚಿಂಗ್, ಬಿಷ್ಣುಪುರ್, ತೌಬಲ್, ಚುರಾಚಂದ್‌ಪುರ ಮತ್ತು ಮಣಿಪುರದ ಕಾಂಗ್‌ಪೋಕ್ಪಿಯ ಪ್ರಾದೇಶಿಕ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಅಮಾನತು ಆದೇಶವನ್ನು ಇನ್ನೂ ಮೂರು ದಿನಗಳವರೆಗೆ ಮುಂದುವರಿಸಲು ನಿರ್ಧರಿಸಿದೆ.
ನವೆಂಬರ್ 16 ರಂದು, ಸರ್ಕಾರ, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿತ್ತು.
ಆದಾಗ್ಯೂ, ಸಾಮಾನ್ಯ ಜನರು, ಆರೋಗ್ಯ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಕಚೇರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ಬ್ರಾಡ್‌ಬ್ಯಾಂಡ್ ಸೇವೆಗಳ ಮೇಲಿನ ನಿರ್ಬಂಧವನ್ನು ಮಂಗಳವಾರ ತೆಗೆದುಹಾಕಿದೆ.
Advertisement