ಲಖನೌ: ಉತ್ತರ ಪ್ರದೇಶ ಉಪಚುನಾವಣೆ ವೇಳೆ ಮತದಾರರ ಗುರುತಿನ ಚೀಟಿ ಪರಿಶೀಲನೆಯಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಚುನಾವಣಾ ಆಯೋಗ (EC) ಬುಧವಾರ ಆದೇಶಿಸಿದೆ.
ಮತದಾರರ ನಿಗ್ರಹ ಮತ್ತು ಮತದಾನ ಕೇಂದ್ರಗಳಲ್ಲಿನ ಅಕ್ರಮಗಳ ಬಗ್ಗೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಆಯೋಗ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಆದೇಶಿಸಿದೆ.
ಮುಜಾಫರ್‌ನಗರದಂತಹ ಪ್ರದೇಶಗಳಲ್ಲಿ ಮತದಾರರು ಮತದಾನ ಮಾಡದಂತೆ ಪೊಲೀಸ್ ಸಿಬ್ಬಂದಿ ತಡೆಯುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ.
ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು. ವೀಡಿಯೊ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮತದಾರರ ನಿಗ್ರಹಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ. ಯಾದವ್ ತಮ್ಮ ಪೋಸ್ಟ್‌ನಲ್ಲಿ, "ಮತದಾರರ ಕಾರ್ಡ್ ಮತ್ತು ಆಧಾರ್ ಐಡಿಗಳನ್ನು ಪರಿಶೀಲಿಸುತ್ತಿರುವ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ವೀಡಿಯೊ ಸಾಕ್ಷ್ಯದ ಆಧಾರದ ಮೇಲೆ ತಕ್ಷಣವೇ ಅಮಾನತುಗೊಳಿಸಬೇಕು" ಎಂದು ಒತ್ತಾಯಿಸಿದ್ದಾರೆ. ಆಧಾರ್ ಅಥವಾ ಗುರುತಿನ ಚೀಟಿಗಳನ್ನು ಪರಿಶೀಲಿಸಲು ಪೊಲೀಸರಿಗೆ ಯಾವುದೇ ಹಕ್ಕಿಲ್ಲ ಎಂದು ಅವರು ಒತ್ತಿ ಹೇಳಿದರು, ಮತಗಟ್ಟೆ ಅಧಿಕಾರಿಗಳಿಗೆ ಮಾತ್ರ ಹಾಗೆ ಮಾಡಲು ಅನುಮತಿ ಇದೆ ಎಂದು ಹೇಳಿದರು.
Advertisement