ರಾಯ್‌ಪುರ: ಛತ್ತೀಸ್ ಗಢ ರಾಜ್ಯದ ರಾಯ್‌ಪುರದಿಂದ ದಕ್ಷಿಣಕ್ಕೆ 500 ಕಿಮೀ ದೂರದಲ್ಲಿರುವ ಸುಕ್ಮಾ ಜಿಲ್ಲೆಯ ಭಂಡಾರ್‌ಪದರ್-ಕೊರಾಜುಗುಡ-ನಗರಂನ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಇಂದು ಶುಕ್ರವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ)ಯ ಕನಿಷ್ಠ 10 ನಕ್ಸಲೀಯರು ಹತ್ಯೆಗೀಡಾಗಿದ್ದಾರೆ.
ಕೊಂಟಾ ಮತ್ತು ಕಿಸ್ತಾರಾಮ್ ಪ್ರದೇಶದ ಮಾವೋವಾದಿಗಳ ಗುಂಪಿಗೆ ಸೇರಿದ ನಕ್ಸಲರ ಉಪಸ್ಥಿತಿಯ ಬಗ್ಗೆ ಒಂದು ನಿರ್ದಿಷ್ಟ ಸುಳಿವಿನ ಮೇರೆಗೆ ಸುಕ್ಮಾ ಪ್ರದೇಶದ ನಿರ್ದಿಷ್ಟ ಸ್ಥಳಗಳಲ್ಲಿ ನಿನ್ನೆ ಭದ್ರತಾ ಪಡೆ ಬೀಡುಬಿಟ್ಟಿತ್ತು. ಜಿಲ್ಲಾ ರಿಸರ್ವ್ ಗಾರ್ಡ್ (DRG) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಜಂಟಿ ತಂಡ ಯೋಜಿತ ಕಾರ್ಯಾಚರಣೆಯಲ್ಲಿ ಉಳಿದಿದ್ದವು.
ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಭೀಕರ ಎನ್‌ಕೌಂಟರ್ ನಡೆದು ಶೋಧ ಕಾರ್ಯಾಚರಣೆಯಲ್ಲಿ ಇದುವರೆಗೆ ಹತ್ತು ಮಾವೋವಾದಿಗಳ ಶವಗಳನ್ನು ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಬಸ್ತಾರ್‌ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರದೇಶದಲ್ಲಿ ಇನ್ನಷ್ಟು ಭದ್ರತಾ ಪಡೆ ಯೋಧರನ್ನು ನಿಯೋಜಿಸಲಾಗಿದ್ದು, ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಪ್ರದೇಶದಲ್ಲಿ ಇನ್ನೂ ಗುಂಡಿನ ಚಕಮಕಿ ಮುಂದುವರಿದಿದೆ. ವಶಪಡಿಸಿಕೊಂಡ ಶವಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಕೌಂಟರ್ ಸ್ಥಳದಿಂದ ಮೂರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು-ಎಕೆ-47, ಆಕ್ರಮಣಕಾರಿ ರೈಫಲ್ ಇನ್ಸಾಸ್ ಮತ್ತು ಸೆಲ್ಫ್-ಲೋಡಿಂಗ್ ರೈಫಲ್ (SLR) ಜೊತೆಗೆ ಇತರ ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಎನ್ ಕೌಂಟರ್ ವೇಳೆ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಈ ವರ್ಷ, ಸಂಘರ್ಷ ಪೀಡಿತ ದಕ್ಷಿಣ ಬಸ್ತಾರ್ ವಲಯದಾದ್ಯಂತ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇದುವರೆಗೆ 207 ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂದಿನ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ತಮ್ಮ ಸರ್ಕಾರ ಮಾವೋವಾದಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದಿದ್ದಾರೆ.
ಬಸ್ತಾರ್‌ನಲ್ಲಿ ನಾಗರಿಕರ ಅಭಿವೃದ್ಧಿ, ಶಾಂತಿ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಎಡಪಂಥೀಯ ಉಗ್ರಗಾಮಿಗಳ ವಿರುದ್ಧದ ಸರಣಿ ಎನ್‌ಕೌಂಟರ್‌ಗಳು ಸಂಘರ್ಷ ಪೀಡಿತ ಬಸ್ತಾರ್ ವಲಯವನ್ನು ಕಾನೂನುಬಾಹಿರ ಮಾವೋವಾದಿಗಳ ಪ್ರಭಾವದಿಂದ ಮುಕ್ತಗೊಳಿಸುವ ಕಾರ್ಯತಂತ್ರದ ಭಾಗವಾಗಿ ಉಳಿದಿವೆ. ಬಸ್ತಾರ್ ಶ್ರೇಣಿಯ ಏಳು ಮಾವೋವಾದಿ ಪೀಡಿತ ಜಿಲ್ಲೆಗಳಲ್ಲಿ ಸುಕ್ಮಾ ಕೂಡ ಒಂದಾಗಿದೆ.
Advertisement