ಇಂಫಾಲ: ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ 258 ಮಂದಿ ಬಲಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ಇಂಫಾಲ್‌ನಲ್ಲಿ ಭದ್ರತಾ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ಸೇನೆ, ಪೊಲೀಸ್, ಸಿಆರ್ ಪಿಎಫ್, ಬಿಎಸ್ ಎಫ್ ಮತ್ತು ಐಟಿಬಿಪಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಲಾಯಿತು ಎಂದರು.
ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ ಪಿ ಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಈಗಾಗಲೇ ಮಣಿಪುರದಲ್ಲಿರುವ 198 ಸೇನಾ ತುಕಡಿ ಅಲ್ಲದೇ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) ಸುಮಾರು 90 ತುಕಡಿ (10,000 ಹೆಚ್ಚುವರಿ ಪಡೆ) ನೆರವನ್ನು ರಾಜ್ಯವು ಪಡೆಯಲಿದೆ ಎಂದು ತಿಳಿಸಿದರು.
ಮೇ 2023 ರಿಂದ ಇಲ್ಲಿವರೆಗೂ ಉಗ್ರರು ಸೇರಿದಂತೆ ಒಟ್ಟು 258 ಮಂದಿ ಸಾವನ್ನಪ್ಪಿದ್ದಾರೆ. ಸಚಿವರು ಮತ್ತು ಶಾಸಕರ ಆಸ್ತಿ ಧ್ವಂಸ ಮತ್ತು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಜನರನ್ನು ಬಂಧಿಸಲಾಗಿದ್ದು, ಸುಮಾರು 3,000 ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
Advertisement