ಜೈಪುರ: ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದ 25 ವರ್ಷದ ಯುವಕನೊಬ್ಬ ಅಂತ್ಯಸಂಸ್ಕಾರಕ್ಕೂ ಮುನ್ನಾ ಕಣ್ತೆರಿದಿದ್ದಾರೆ. ಇದರಿಂದಾಗಿ ಮೂವರು ವೈದ್ಯರನ್ನು ಅಮಾನತುಗೊಳಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಅಂದಹಾಗೆ, ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದ ಶ್ರವಣ ದೋಷ ಹೊಂದಿದ್ದ ಯುವಕನನ್ನು ರೋಹಿತಾಶ್ ಕುಮಾರ್ ಎಂದು ಗುರುತಿಸಲಾಗಿದೆ. ಯಾವುದೇ ಕುಟುಂಬ ಇಲ್ಲದೆ ಆಶ್ರಯ ಮನೆಯೊಂದರಲ್ಲಿ ವಾಸಿಸುತ್ತಿದ್ದ ಆತನನ್ನು ಜಿಲ್ಲಾ ಆಸ್ಪತ್ರೆಗೆ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನನ್ನು ನಂತರ ಜೈಪುರಕ್ಕೆ ಕರೆದೊಯ್ಯಲಾಗುತಿತ್ತು. ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು. ವೈದ್ಯರ ನಿರ್ಲಕ್ಷ್ಯವನ್ನು ಪರಿಗಣಿಸಿದ ಜುಂಜುನು ಜಿಲ್ಲಾಧಿಕಾರಿ ರಾಮಾವತಾರ್ ಮೀನಾ, ಗುರುವಾರ ರಾತ್ರಿ ಡಾ. ಯೋಗೇಸ್ ಜಖಾರ್, ಡಾ. ನವನೀತ್ ಮೀಲ್ ಮತ್ತು ಪಿಎಂಒ ಡಾ.ಸಂದೀಪ್ ಪಚಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ವೈದ್ಯಕೀಯ ಇಲಾಖೆಯ ಕಾರ್ಯದರ್ಶಿಗೆ ತಿಳಿಸಲಾಗಿದೆ ಎಂದು ಮೀನಾ ತಿಳಿಸಿದ್ದಾರೆ.
ಆರೋಗ್ಯ ಹದಗೆಟ್ಟ ನಂತರ ಆಶ್ರಯ ಮನೆಯಲ್ಲಿ ಗುರುವಾರ ಪ್ರಜ್ಞಾಹೀನರಾಗಿ ಬಿದ್ದದ್ದ ಕುಮಾರ್ ಅವರನ್ನು ಜುಂಜುನುವಿನ BDK ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಆತ ಸ್ಪಂದಿಸದಿದ್ದಾಗ ಮಧ್ಯಾಹ್ನ2 ಗಂಟೆ ಸುಮಾರಿನಲ್ಲಿ ಮೃತಪಟ್ಟಿರುವುದಾಗಿ ಘೋಷಿಸಿದ್ದ ವೈದ್ಯರು, ಶವಗಾರದಲ್ಲಿ 2 ಗಂಟೆಗಳ ಕಾಲ ದೇಹವನ್ನು ಇಟ್ಟಿದ್ದರು.
ಪಂಚನಾಮೆ ಮಾಡಿದ್ದ ಪೊಲೀಸರು ದೇಹವನ್ನು ಅಂತ್ಯಸಂಸ್ಕಾರ ಮಾಡಲು ಕರೆದೊಯ್ದಿದ್ದರು. ಚಟದ ಮೇಲೆ ದೇಹವನ್ನು ಇಟ್ಟಿದ್ದಾಗ ಕುಮಾರ್ ಇದ್ದಕ್ಕಿದ್ದಂತೆ ಉಸಿರಾಡಲು ಶುರು ಮಾಡಿದ್ದಾರೆ. ಕೂಡಲೇ ಅಂಬ್ಯುಲೆನ್ಸ್ ಕರೆಯಿಸಿದ್ದು, ಆಸ್ಪತ್ರೆಗೆ ವಾಪಸ್ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಕಂದಾಯ ಅಧಿಕಾರಿ ಮಹೇಂದ್ರ ಮುಂಡ್, ಸಾಮಾಜಿಕ ನ್ಯಾಯ ಇಲಾಖೆ ಉಪ ನಿರ್ದೇಶಕರಾದ ಪಾವನ್ ಪೂನಿಯಾ ಕೂಡಾ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದಿದ್ದಾರೆ.
Advertisement