ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನವೇ ಮಹಾರಾಷ್ಟ್ರದ ಮುಂದಿನ ಸಿಎಂ ಬಗ್ಗೆ ಚರ್ಚೆಗಳು ಜೋರಾಗಿವೆ. ಮತಗಳ ಎಣಿಕೆಗೆ ಮುಂಚೆಯೇ ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಸಿಎಂ ಸ್ಥಾನದ ಬಗ್ಗೆ ಚರ್ಚೆ ಜೋರಾಗಿದೆ. ಎರಡೂ ಪಾಳಯಗಳಿಂದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಹೊಸ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿದ್ದಾರೆ. 288 ಸದಸ್ಯ ಬಲದ ಮಹಾರಾಷ್ಟ್ರದ ವಿಧಾನಸಭೆಗೆ ಕಳೆದ ಬುಧವಾರ ಮತದಾನ ಪೂರ್ಣಗೊಂಡಿದೆ.
ಮತದಾನದ ನಂತರ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ತಮ್ಮ ಪಕ್ಷದ ನಾಯಕತ್ವದಲ್ಲಿ ಮಹಾರಾಷ್ಟ್ರದಲ್ಲಿ ಎಂವಿಎ ಸರ್ಕಾರವನ್ನು ರಚಿಸಲಾಗುವುದು ಎಂದು ಪ್ರತಿಪಾದಿಸಿದರು. ಹೊಸ ವಿಧಾನಸಭೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಮತದಾನದ ಟ್ರೆಂಡ್ ಗಳು ಸೂಚಿಸುತ್ತವೆ ಎಂದು ಅವರು ಹೇಳಿದರು. ನಾಳೆ ಬೆಳಗ್ಗೆ ಮತ ಎಣಿಕೆ ಆರಂಭವಾಗಲಿದ್ದು, ಗೆಲುವು ಸಾಧಿಸುವ ವಿಶ್ವಾಸವಿದೆ. ನಮ್ಮ ಪಕ್ಷದಿಂದ ಸುಮಾರು 160-165 ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಎಂವಿಎ ಬಹುಮತ ಪಡೆದ ನಂತರ ಎಲ್ಲಾ ಮೈತ್ರಿ ಪಾಲುದಾರರು ಸೇರಿ ಚರ್ಚಿಸಿ ಮುಂದಿನ ಮುಖ್ಯಮಂತ್ರಿ ಬಗ್ಗೆ ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ನಾನಾ ಪಟೋಲೆ ಅವರು ಮುಂದಿನ ಮುಖ್ಯಮಂತ್ರಿ ಎಂದು ಸೋನಿಯಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಘೋಷಿಸಬೇಕು. ತಮ್ಮನ್ನು ತಾವೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುವುದಲ್ಲ ಎಂದು ಸಂಜಯ್ ರಾವತ್ ಹೇಳುವ ಮೂಲಕ, ನಾನಾ ಪತೋಲ್ ಗೆ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಒಳಗೊಂಡಿರುವ ಎಂವಿಎ ಮತ್ತು ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಒಳಗೊಂಡಿರುವ ಮಹಾಯುತಿ ಮೈತ್ರಿಕೂಟಗಳು ಸರ್ಕಾರ ರಚಿಸುವ ವಿಶ್ವಾಸದಲ್ಲಿವೆ. ಸೀಟು ಹಂಚಿಕೆಯ ವೇಳೆಯೇ, ಮಹಾ ವಿಕಾಸ್ ಅಘಾಡಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ಫೈನಲ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಸೀಟು ಹಂಚಿಕೆಗೇ ಸಾಕಷ್ಟು ಸವಾಲನ್ನು ಎದುರಿಸ ಬೇಕಾಗಿದ್ದರಿಂದ, ಆ ವಿಷಯವನ್ನು ಫಲಿತಾಂಶದ ನಂತರ ಅಂತಿಮಗೊಳಿಸಲು ನಿರ್ಧರಿಸಲಾಯಿತು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಯಿತು ಎಂದು ಶಿವಸೇನೆ ಶಾಸಕ ಮತ್ತು ಪಕ್ಷದ ವಕ್ತಾರ ಸಂಜಯ್ ಶಿರ್ಸಾತ್ ಹೇಳಿದ್ದಾರೆ. ಮತದಾರರು ಮತದಾನದ ಮೂಲಕ ಶಿಂಧೆ ಪರ ಒಲವು ತೋರಿಸಿದ್ದಾರೆ. ಶಿಂಧೆ (ಮುಂದಿನ ಸಿಎಂ ಆಗುವುದು) ಅವರ ಹಕ್ಕು ಎಂದು ನಾನು ಭಾವಿಸುತ್ತೇನೆ ಮತ್ತು ಅವರು ಮುಂದಿನ ಸಿಎಂ ಆಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಶಿರ್ಸತ್ ತಿಳಿಸಿದ್ದಾರೆ.
ಬಿಜೆಪಿ ನಾಯಕ ಪ್ರವೀಣ್ ದಾರೇಕರ್ ಅವರು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಬಿಜೆಪಿಯಿಂದ ಯಾರಾದರೂ ಸಿಎಂ ಆಗುತ್ತಿದ್ದರೆ ಅದು ದೇವೇಂದ್ರ ಫಡ್ನವೀಸ್ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಎನ್‌ಸಿಪಿ ನಾಯಕ ಅಮೋಲ್ ಮಿಟ್ಕರಿ ಅವರು ತಮ್ಮ ಪಕ್ಷದ ಮುಖ್ಯಸ್ಥ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಹೆಸರನ್ನುಸಿಎಂ ಹುದ್ದೆಗೆ ತೂರಿ ಬಿಟ್ಟಿದ್ದಾರೆ. ಫಲಿತಾಂಶ ಏನೇ ಇರಲಿ, ಎನ್‌ಸಿಪಿ ಕಿಂಗ್‌ಮೇಕರ್ ಆಗಲಿದೆ ಎಂದು ಮಿಟ್ಕರಿ ಹೇಳಿದರು.
ಮಹಾಯುತಿಯ ಮೂರು ಪಕ್ಷಗಳು ಒಟ್ಟಿಗೆ ಕುಳಿತು "ಒಳ್ಳೆಯ ನಿರ್ಧಾರ" ತೆಗೆದುಕೊಳ್ಳುತ್ತಾರೆ ಎಂದು ದೇವೇಂದ್ರ ಫಡ್ನೀಸ್ ಸಮರ್ಥಿಸಿಕೊಂಡರು. ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ದಾರೆಕರ್, ಮಹಾಯುತಿಯು ಮುಂದಿನ ಸರ್ಕಾರವನ್ನು ರಚಿಸುತ್ತದೆ ಎಂದು ಪ್ರತಿಪಾದಿಸಿದರು, MVA ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ತಳ್ಳಿಹಾಕಿದರು ಮತ್ತು ವಿರೋಧ ಪಕ್ಷವು ಆಂತರಿಕ ಬಿರುಕುಗಳಿಂದ ಜರ್ಜರಿತವಾಗಿದೆ ಎಂದು ಹೇಳಿದರು. ಮಹಾರಾಷ್ಟ್ರದ ಜನರು ಸ್ಪಷ್ಟ ಜನಾದೇಶ ನೀಡಿದ್ದಾರೆ. ಮುಖ್ಯಮಂತ್ರಿಯಾಗುವುದು ಮಹಾಯುತಿಯಿಂದಲೇ ಹೊರತು ಎಂವಿಎಯಿಂದಲ್ಲ, ಖಂಡಿತಾ ಕಾಂಗ್ರೆಸ್‌ನಿಂದಲ್ಲ ಎಂದು ಅವರು ಪ್ರತಿಪಾದಿಸಿದರು. MVA ಯೊಳಗಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತಾ, ಕಾಂಗ್ರೆಸ್ ಸಂಸದೆ ಪ್ರಣಿತಿ ಶಿಂಧೆ ಮತ್ತು ಆಕೆಯ ತಂದೆ ಮತ್ತು ಮಾಜಿ ಸಿಎಂ ಸುಶೀಲ್‌ಕುಮಾರ್ ಶಿಂಧೆ ಅವರು ಸೋಲಾಪುರ ಜಿಲ್ಲೆಯ ಕ್ಷೇತ್ರವೊಂದರಲ್ಲಿ ಉದ್ಧವ್ ಠಾಕ್ರೆ ಅವರ ಅಭ್ಯರ್ಥಿಯ ವಿರುದ್ಧ ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದು ದಾರೆಕರ್ ಹೇಳಿದರು. ಆಂತರಿಕ ಹೊಂದಾಣಿಕೆಯಿಲ್ಲದ ಪಕ್ಷಗಳು ಮುಖ್ಯಮಂತ್ರಿಯನ್ನು ಹೇಗೆ ನಿರ್ಧರಿಸಬಹುದು?" ಪಟೋಲೆ ಅವರ ಮುಖ್ಯಮಂತ್ರಿಯಾಗಬೇಕೆಂಬ ಆಕಾಂಕ್ಷೆಗಳು "ಮುಂಗೇರಿಲಾಲ್ ಕೆ ಹಸೀನ್ ಸಪ್ನೆ" (ಹಗಲುಗನಸು) ಹೊರತು ಬೇರೇನೂ ಅಲ್ಲ ಎಂದು ಬಿಜೆಪಿ ನಾಯಕ ಹೇಳಿದರು.
Advertisement