ಛತ್ತೀಸ್‌ಗಢ: ನಕ್ಸಲ್ ಬಾಧಿತ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಭಾನುವಾರ ನಕ್ಸಲೀಯರು ಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡಿದ್ದರಿಂದ ಜಿಲ್ಲಾ ಮೀಸಲು ಪಡೆಯ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ. ಜಿಲ್ಲೆಯ ಅದೇ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳದಲ್ಲಿ ನಕ್ಸಲೀಯರು ಹಾಕಿದ್ದ ಮತ್ತೊಂದು ಐಇಡಿಯನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಂತಲ್ನಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ರಾಯಗುಡಾ ಪೊಲೀಸ್ ಕ್ಯಾಂಪ್ ಬಳಿ ಬಳಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಐಇಡಿ ಸ್ಫೋಟ ಸಂಭವಿಸಿದೆ. ಜಿಲ್ಲಾ ರಿಸರ್ವ್ ಪೊಲೀಸ್ (ಡಿಆರ್‌ಜಿ) ತಂಡವು ಪ್ರಬಲ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆಯಲ್ಲಿ ಡಿಆರ್‌ಜಿ ಕಾನ್ಸ್‌ಟೇಬಲ್ ಪೊಡಿಯಂ ವಿನೋದ್ ಗೆ ಐಇಡಿ ತಗುಲಿ ಸ್ಪೋಟವಾಗಿದೆ. ನಂತರ ಗಾಯಗೊಂಡ ಯೋಧನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಔಷಧೋಪಚಾರಕ್ಕಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಾಯದಿಂದ ಪಾರಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅದೇ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಿಲ್ಲಾ ಪಡೆಗಳ ಜಂಟಿ ತಂಡವು ಚಿಂತಲ್ನಾರ್-ನರಸಪುರಂ ರಸ್ತೆಯಲ್ಲಿ ನಕ್ಸಲೀಯರು ಅಡಗಿಸಿದ್ದ ಐಇಡಿಯನ್ನು ವಶಪಡಿಸಿಕೊಂಡಿದ್ದಾರೆ. ನಂತರ ಸ್ಫೋಟಕ ಸ್ಫೋಟಗೊಳ್ಳದಂತೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.
Advertisement