ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೆನ್ ಅವರು ನವೆಂಬರ್ 28 ರಂದು ಜಾರ್ಖಂಡ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅದ್ದೂರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ವಿರೋಧ ಪಕ್ಷದ ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಇಂದು ಸಂಜೆ ರಾಜಭವನದಲ್ಲಿ ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರನ್ನು ಭೇಟಿ ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹೇಮಂತ್ ಸೊರೆನ್, ನೂತನ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ 28 ರಂದು ಪದ ಗ್ರಹಣ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನಾ ಪಕ್ಷದ ಕಚೇರಿಯಲ್ಲಿ ನಡೆದ JMM ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಹೇಮಂತ್ ಸೊರೆನ್ ಅವರನ್ನು ನೂತನ ಶಾಸಕರ ಸರ್ವಾನುಮತದಿಂದ ಆಯ್ಕೆ ಮಾಡಿದರು. ಇತ್ತೀಚಿಗೆ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಹೇಮಂತ್ ಸೊರೆನ್ ಅವರ ಪಕ್ಷ 34, ಕಾಂಗ್ರೆಸ್ 16, ಆರ್ ಜೆಡಿ 4 ಮತ್ತು ಸಿಪಿಐ- ಎಂಎಲ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಅವಧಿಯಲ್ಲೂ ವಿಪಕ್ಷಗಳ ಮೈತ್ರಿಕೂಟ INDIA ಸರ್ಕಾರ ರಚಿಸುವಲ್ಲಿ ಹಾದಿ ಸುಗಮವಾಗಿದೆ.
Advertisement